Wednesday, July 26, 2017

ಮಾಯವಾದ ಅಬ್ಬಿ ನೀರು ಮತ್ತು ಜಲಮರುಪೂರಣ



ಪರಿಸರ ಸಂರಕ್ಷಣೆಯ ಬಗ್ಗೆ ಮಾತಾಡುವುದು ಸುಲಭ, ಆದರೆ ಅದರ ಬಿಸಿ ತಗಲುವುದು ಬರಗಾಲದಂತಹ ವಿದ್ಯಮಾನಗಳು ಜರುಗತೊಡಗಿದಾಗಲೇ.  ನೈಸರ್ಗಿಕ ಅರಣ್ಯದ ಮೇಲಿನ ಒತ್ತಡ ಹೆಚ್ಚುತ್ತಾ ಹೋದಂತೆಲ್ಲ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂಬುದು ಅನುಭವಕ್ಕೆ ಬಂದ ವಿಷಯವೇ ಆದರೂ, ಈ ವರ್ಷದಷ್ಟು ಅನಾನುಕೂಲ ಯಾವತ್ತೂ ಆಗಿರಲಿಲ್ಲ.  ಮಲೆನಾಡಿನ ಕೆಲವು ಭಾಗಗಳಲ್ಲಿ ಕಂಡುಬರುವ ಅಬ್ಬಿ ನೀರು ಎಂಬ ವಿಸ್ಮಯ ಕಳೆದ ಮೂರು ವರ್ಷಗಳಿಂದ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತಾ ಇದ್ದು , ಈ ವರ್ಷ ಮಾಯವಾದ  ಘಟನೆಗೆ ಮಳೆಯ ಕೊರತೆ ಮೂಲ ಕಾರಣ ಅನ್ನಿಸಿದರೂ ನಿಜವಾದ ಕಾರಣ ಬೇರೆಯೇ ಇತ್ತು. ತಲತಲಾಂತರಗಳಿಂದ ಹರಿದು ಬರುತ್ತಿರುವ ಜಲ  ಅದರ ಮೂಲದಲ್ಲಿಯೇ ಬತ್ತುತ್ತಿರುವುದು, ಮಲೆನಾಡಿಗರ ನಿದ್ದೆಗೆಡಿಸಿದ್ದಂತೂ ಹೌದಾಗಿತ್ತು. 

ಹೌದು. ತಾಯಿ ಭಾಗೀರಥಿಯೇ ಮುನಿದರೆ ಈ ಮನುಜ ಹೇಗೆ ಬದುಕಿಯಾನು ಅಲ್ಲವೇ? ತಾಯಿಯ ಮುನಿಸು ಕಡಿಮೆಯಾಗಲು ಮಕ್ಕಳು ಏನಾದರೂ ಉಪಾಯ ಮಾಡಬೇಕಲ್ಲ ! ಎಂದು ಮಲೆನಾಡಿನ ಸಾಗರ ತಾಲೂಕಿನ  ಹೊಸಳ್ಳಿ, ಹಂಸಗಾರು ಮತ್ತು ಗೋಟಗಾರು ಊರಗಳಲ್ಲಿನ ಕೆಲವು ಉತ್ಸಾಹೀ ಯುವಕರು ಎರಡು ತಿಂಗಳ ಹಿಂದೆ  ಚರ್ಚೆ ನಡೆಸಿದರು. ಚರ್ಚೆಯಲ್ಲಿ ನಿರ್ಧಾರವಾಗಿದ್ದು “ನಮ್ಮ ನೀರು ನಮ್ಮೆಲ್ಲರಿಗಿರಲಿ, ನೀರಿಂಗಿಸೋಣ “ ಎಂಬ  ಯೋಜನೆ.  ಜಿತೇಂದ್ರ ಹಿಂಡುಮನೆ ಮತ್ತು ಅರುಣ್ ಹೆಗಡೆ ಗೊಟಗಾರು ಇವರ ಮುಂದಾಳತ್ವದಲಿ ಪ್ರಾರಂಭವಾದ ನೀರಿಂಗಿಸುವ ಕಾರ್ಯ, ಸುತ್ತಮುತ್ತಲಿನ ಊರುಗಳಲ್ಲಿ ಕುತೂಹಲವನ್ನು ಹುಟ್ಟಿಸಿತು. ಪ್ರಾರಂಭದಲ್ಲಿ 25,000 /- ರೂಪಾಯಿಗಳಿಂದ ಯೋಜನೆ ಆರಂಭವಾಯಿತು.  ಮುಂದುವರಿದಂತೆ ಊರವರೆಲ್ಲರೂ ನಿಧಾನವಾಗಿ ಕೈ ಜೋಡಿಸಿ, ಹಣಸಹಾಯವನ್ನೂ ಮಾಡಿದ್ದರಿಂದ ಕೆಲಸ ವೇಗವಾಗಿ ಸಾಗತೊಡಗಿತು.

ಓಡುವ ನೀರನ್ನು ನಡೆಯುವಂತೆ , ನಡೆಯುವ ನೀರನ್ನು ನಿಲ್ಲುವಂತೆ , ನಿಂತ ನೀರನ್ನು  ಹಿಡಿಯುವಂತೆ ವ್ಯವಸ್ಥೆ ಮಾಡಬೇಕು ಎಂಬುದು ಜಲತಜ್ಞರೆಲ್ಲರೂ ಹೇಳುವ ಮಾತು. ಇಲ್ಲಿ ಅದನ್ನು ಪಾಲಿಸಲಾಗಿದೆ. ಎತ್ತರದ ಗುಡ್ಡಗಳಿಂದ ಓಡೋಡಿ ಬರುವ ನೀರು  ಅಲ್ಲಲ್ಲಿ ನಿಧಾನವಾಗುವಂತೆ ಇಂಗುಗುಂಡಿಗಳನ್ನು ತೋಡುವ ಯೋಜನೆ ರೂಪಿಸಿದ್ದಾರೆ. ನೀರಿನ ಓಟಕ್ಕೆ ತಡೆಯಾಗುವಂತೆ ಚಿಕ್ಕಚಿಕ್ಕ ಇಂಗುಗುಂಡಿಗಳ ನಿರ್ಮಾಣವೂ ಬಹಳ ಕಡೆ ನಡೆದಿದೆ. ಎರಡರಿಂದ ಮೂರು ಲಕ್ಷ ಲೀಟರ್ ನೀರಿಂಗಬಹುದಾದ ೧೬ ದೊಡ್ಡ ಗುಂಡಿಗಳು ಮತ್ತು ಸುಮಾರು ಇನ್ನೂರರಿಂದ ಮುನ್ನೂರು ಲೀಟರ್ ನೀರಿಂಗಬಹುದಾದ ಹಲವಾರು ಚಿಕ್ಕ ಇಂಗುಗುಂಡಿಗಳನ್ನು ಈ ವರ್ಷದ ಲೆಕ್ಕದಲ್ಲಿ ಮಾಡಿ ಮುಗಿಸಿದ್ದಾರೆ.  ಅದಲ್ಲದೇ ಗೊಟಗಾರು ಗ್ರಾಮದ ಕೆರೆಕೋಡಿ ಕೆಲಸವನ್ನೂ ಮಾಡಿದ್ದಾರೆ.

ಇಷ್ಟೇ ಆಗಿದ್ದರೆ ಬಿಡು ಯಂತ್ರಗಳ ಮೂಲಕ ಕೆಲಸ ಮಾಡಿದ್ದಾರೆ ಅನ್ನಬಹುದಿತ್ತು. ಆದರೆ ಇದಕ್ಕಿಂತ ದೊಡ್ಡ ಇನ್ನೊಂದು  ಕೆಲಸವನ್ನೂ ಈ ಗ್ರಾಮಗಳ ಯುವಕರು ಮಾಡಿದ್ದಾರೆ. ನೇರಲು, ಹಲಸು, ಮಾವು, ನೆಲ್ಲಿ, ಹೊನ್ನೆ, ಹೆಬ್ಬೇವಿನ  ಒಂದು ಸಾವಿರ ಸಸಿಗಳನ್ನು ಗುಡ್ಡದ ಮೇಲಕ್ಕೆ  ಸುಮಾರು ಎರಡರಿಂದ ನಾಲ್ಕು  ಕಿಲೋಮೀಟರ್ ದೂರದ ತನಕವೂ ಹೊತ್ತೊಯ್ದು , ಅಲ್ಲಲ್ಲಿ ಸೂಕ್ತ ಜಾಗಗಳಲ್ಲಿ ನೆಟ್ಟಿದ್ದಾರೆ. ಸಾಧಾರಣವಾಗಿ ನಡೆದು ಹೋಗುವುದೇ 

ಕಷ್ಟದಾಯಕ ಎನಿಸುವ ಜಾಗದಲ್ಲಿ, ಪ್ರಾರಂಭದ ಮಳೆಯ ನಡುವೆಯೂ,  ಗಿಡಗಳನ್ನು ಹೊತ್ತೊಯ್ದ ಪರಿಶ್ರಮ ಶ್ಲಾಘನಾರ್ಹ. ಹೊಸಳ್ಳಿ, ಹಂಸಗಾರು, ಗೋಟಗಾರು, ಗುರ್ಲಮಂಜಿ ಊರುಗಳ ಹಿಂದಿನ ಗುಡ್ಡಗಳಲ್ಲಿ ನಡೆದ ಈ ಎಲ್ಲ  ಕೆಲಸಗಳು ನಿಧಾನವಾಗಿ ಸುತ್ತಮುತ್ತಲ ಗ್ರಾಮಗಳಿಗೂ ಸ್ಪೂರ್ತಿದಾಯಕ ಆಗುತ್ತಿದೆ.            




ಹೊಸಳ್ಳಿ, ಗೋಟಗಾರು, ಮರಹಾನ್ಕುಳಿ, ಮರಡುಮನೆ ಮತ್ತು  ಅರೆಹದ್ದ ಊರಿನವರಾದ,  ಜಿತೇಂದ್ರ,  ಅರುಣ,  ಶೇಡಿ ಲಕ್ಷ್ಮಿನಾರಾಯಣ, ವಿಶ್ವೇಶ್ವರ ಗಾಲಿ, ಕಲ್ಸೆ ತಿಮ್ಮಪ್ಪ, ಹಿಂಡೂ ಪ್ರಭಾಕರ,  ಹಿಂಡೂ ತಿಮ್ಮಪ್ಪ,  ಮಹೇಶ, ಹರೀಶ,  ಕಷ್ಣ, ಅಟ್ಟೆ ಶ್ರೀಕಾಂತ ಮುಂತಾದವರ ಆಸಕ್ತಿ, ಉತ್ಸಾಹದಿಂದ  ನಿರೀಕ್ಷೆಗೂ ಮೀರಿ ಸಫಲವಾದ ಈ ಕೆಲಸಕ್ಕೆ ಯಾವುದೇ ಉದ್ಘಾಟನೆ, ಸಭೆ ಸಮಾರಂಭಗಳಿರಲಿಲ್ಲ.   ಕೇವಲ ಕೆಲಸಕ್ಕೆ ಆದ್ಯತೆ ನೀಡಿ ನಡೆಸಲಾದ ಈ ಕಾರ್ಯಕ್ಕೆ ಒತ್ತಾಯದ ವಸೂಲಿಯೂ  ಇರಲಿಲ್ಲ.  ಜನರು  ಸ್ವಯಂ ಪ್ರೇರಿತವಾಗಿ ಬಂದು  ಸೇರ್ಪಡೆಯಾಗಿ,  ನಿರೀಕ್ಷೆಗೂ ಮೀರಿ ಬೆಂಬಲ ನೀಡುವುದರ ಜೊತೆಗೆ  ಧನಸಂಗ್ರಹವೂ ಆಗಿದ್ದರಿಂದ ನಮ್ಮ ಉತ್ಸಾಹ ಹೆಚ್ಚಾಯಿತು ಎನ್ನುತ್ತಾರೆ ಈ ಕೆಲಸ ಪ್ರಾರಂಭಿಸಿದ ಗೊಟಗಾರು ಅರುಣ ಹೆಗಡೆ ಮತ್ತು ಜಿತೇಂದ್ರ.
“ಇಲ್ಲಿಯವರೆಗೆ ಎರಡು ಲಕ್ಷ ರೂಪಾಯಿಗಳು ಖರ್ಚಾಗಿವೆ, ಹೆಚ್ಚಿನ ಪಾಲು ಜೇಸಿಬಿ ಯಂತ್ರದ ಬಾಡಿಗೆಗಾಗಿ ಖರ್ಚಾಗಿದೆ. ಬಹಳಷ್ಟು ಸಸಿಗಳನ್ನು ಅರಣ್ಯ ಇಲಾಖೆಯವರು ನೀಡಿದ್ದಾರೆ. ಸ್ವಲ್ಪ ಸಸಿಗಳು ಇಲ್ಲೇ ತಯಾರಿಸಿದ್ದು.  ನಮಗೆ ಬೇರಾವ ಕೆಲಸವೂ ಕಷ್ಟವಾಗಲಿಲ್ಲ, ಆದರೆ ನಾಲ್ಕೈದು ಕೇಜಿ ತೂಗುವ ಸಸಿಗಳನ್ನು ಗುಡ್ಡಕ್ಕೆ ಸಾಗಿಸುವುದು ಮಾತ್ರ ಬಹಳ ಕಷ್ಟ ಎನಿಸಿತು. ಆದರೂ ಪಟ್ಟು ಬಿಡದೆ ಕೆಲಸ ಮುಗಿಸಿದ ಮೇಲೆ, ನಮ್ಮ ಶ್ರಮ ಸಾರ್ಥಕವಾಯಿತು ಎನಿಸುತ್ತಿದೆ,  ನಮ್ಮ ಈ 


ಹುಚ್ಚು ಹವ್ಯಾಸಕ್ಕೆ ಏನನ್ನುತ್ತಾರೋ ಎಂಬ ಅಳುಕಿನಿಂದಲೇ ಕೆಲಸ ಪ್ರಾರಂಭಿಸಿದ ನಮಗೆ ಈಗ ಧೈರ್ಯ ಬಂದಿದೆ. ತಮ್ಮ ಕೈ ಮೀರಿ ಸಹಾಯ ಮಾಡಿರುವ ಗ್ರಾಮಸ್ಥರಿಗೆ ಮತ್ತು ಸ್ನೇಹಿತರಿಗೆ ಧನ್ಯವಾದಗಳು. ನೀರಿಲ್ಲದೆ ಏನಿದ್ದರೇನು ? ನೀರಿದ್ದೂ ನೀರಿಂಗಿಸದಿದ್ದರೇನು ? ನೀರನ್ನು ಮಿತವಾಗಿ ಬಳಸೋಣ, ಅಂರ್ತಜಲದ ಮಟ್ಟವನ್ನು ಹೆಚ್ಚಿಸೋಣ....ಬನ್ನಿ ಪಾಲ್ಗೊಳ್ಳಿ”  ಎನ್ನುವಾಗ ಅವರ ಸಂತಸ ಮಾತಿನಲ್ಲಿ ಪ್ರತಿಫಲಿಸುತ್ತಿತ್ತು.
ಮಲೆನಾಡಿನಲ್ಲೇ  ನೀರಿಗಾಗಿ ಹಾಹಾಕಾರ ಎದ್ದಿರುವ ಇಂದಿನ ಪರಿಸ್ಥಿತಿಯಲ್ಲಿ, ಎಲೆಮರೆಯ ಕಾಯಿಯಂತೆ ನಡೆಯುತ್ತಿರುವ  ಇಂತಹ ಕೆಲಸಗಳು ಹೆಚ್ಚುಹೆಚ್ಚು ಬೆಳಕಿಗೆ ಬರಬೇಕಾಗಿದೆ. ಆ ಮೂಲಕ ಹೆಚ್ಚುಹೆಚ್ಚು ಜನರು ಸ್ಫೂರ್ತಿ ಪಡೆದು, ತಾವೂ ನೀರಿಂಗಿಸುವ ಕಾರ್ಯ ಪ್ರಾರಂಭ ಮಾಡಿದರೆ, ಜಲ, ಜನ ಎರಡೂ ಸಮೃದ್ದಿಯಾಗುವುದರಲ್ಲಿ ಸಂಶಯವಿಲ್ಲ.
-
Hosadigantha ePaper -

Wednesday, February 15, 2017

ಯಲ್ಲಾಪುರ ತಾಲೂಕಾ 4ನೇ ಕನ್ನಡ ಸಮ್ಮೇಳನ - ಅಧ್ಯಕ್ಷೀಯ ಭಾಷಣ ಶ್ರೀಯುತ ಪ.ಗ.ಭಟ್ ಅವರಿಂದ

ಯಲ್ಲಾಪುರ ತಾಲೂಕಾ 4ನೇ ಕನ್ನಡ ಸಮ್ಮೇಳನ - ಅಧ್ಯಕ್ಷೀಯ ಭಾಷಣ
ದಿನಾಂಕ : 13-14 ಫೆಬ್ರವರಿ 2017
ಸ್ಥಳ : ಯಲ್ಲಾಪುರ ಗಾಂಧಿ ಕುಟೀರ
ತಾಲೂಕಾ ಪಂಚಾಯತ ಆವಾರ
ದಿ|| ಡಾ|| ಜಿ. ಪಿ. ಭಟ್ಟ ಮದ್ಗುಣಿ ಪ್ರವೇಶ ದ್ವಾರ
ದಿ|| ವಿ. ಆರ್. ಪರಮಾನಂದ ವೇದಿಕೆ

ಎಲ್ಲ ಬಲ್ಲವರಿಲ್ಲ ಬಲ್ಲಿದರು ಬಹಳಿಲ್ಲ
ಬಲ್ಲವರು ಇದ್ದು ಬಲವಿಲ್ಲ ಸಾಹಿತ್ಯ
ವೆಲ್ಲರಿಗೂ ಇಲ್ಲ ಸರ್ವಜ್ಞ.




ಆತ್ಮೀಯರೇ
 ಅಕ್ಕರೆಯ ಹಿರಿಕಿರಿಯ ತಾಲೂಕಿನ ಕನ್ನಡಾಭಿಮಾನಿ ಮನಸ್ಸುಗಳೇ, ಮಹನೀಯರೆ, ಅಕ್ಕತಂಗಿಯರೇ..
ಅನೂಹ್ಯವಾಗಿ ಮುಖಾಮುಖಿಯಾಗುವ ಈ ರೋಮಾಂಚಕ ಸನ್ನಿವೇಶದಲ್ಲಿ ಭವ್ಯ ಸಭಾಂಗಣದಲ್ಲಿ ಅಭಿಮಾನದ ನೋಟ ಬೀರುತ್ತಿರುವ ಪ್ರಾಂಜಲ ಮನಸ್ಸಿನ ಹಿರಿಯ, ಕಿರಿಯ, ಎಳೆಯ-ಹಳೆಯ ಸಹೃದಯ, ಭಾವನಾ ಪ್ರತೀಕದ ಸಂವೇದನಾಶೀಲ ಹೃದಯವಂತರೇ ; ಅಂತರಂಗದ ಕದ ತೆರೆಯುವ ಮುನ್ನ ಕೃತಜ್ಞತೆಯ ಕಿರುಗಾಣಿಕೆ ಧನ್ಯತಾಭಾವದ ಪಾವನತೀರ್ಥದಲಿ ಮಿಂದೆದ್ದ ಪುಳಕತನದೊಡನೆ ಇದೋ ನಿಮಗೆ ;

 ಮಿತ್ರರೆ- ಏರಬೇಕೆಂಬ ಹಂಬಲದೊಡನೆ ಸನ್ನದ್ಧನಾಗಿ ಕನಸುಗಳ ಪೆಟ್ಟಿಗೆಯ ಹೊತ್ತು ಸಾಹಿತ್ಯದ ಯಾನ ಆರಂಭಿಸಿದ ಈ ಸುಮಾರು 50 ವರ್ಷಗಳ ನಂತರವು ನಿಂತಲ್ಲೇ ನಿಂತವನಾಗಿ ಹೆಜ್ಜೆಗಳ ಮೇಲೆ ಹೆಜ್ಜೆ ಇಟ್ಟರೂ ಹಿಂಬಾಲಿಸಿದ ನೆರಳನ್ನೇ ತುಳಿಯುತ್ತ ಹಾರಬಹುದೆಂಬ ಭರವಸೆಯನಿಟ್ಟು ಆಗೊಮ್ಮೆ-ಈಗೋಮ್ಮೆ ಜಿಗಿಯಲೆತ್ನಿಸಿ ವಿಫಲನಾಗಿ ನೇಪಥ್ಯಕೆ ಸರಿಯಬೇಕೆಂದಿರುವ ಅನಾಮಿಕನೊಬ್ಬನನ್ನು ಚಿಂತಕರ ಸಾಲಿನಲ್ಲಿ ನಿಲ್ಲಿಸಿ; ಉತ್ಸವದ ಉಡುಗೆ ತೊಡಿಸಿ, ರಥವೇರಿಸಿ ಜೀವನದ ಅಮೃತ ಘಳಿಗೆಗೆ ಸಾಕ್ಷಿಯಾದ ಹಿಂದಿನ ಎಲ್ಲ ಗೌರವಾನ್ವಿತರ ಸಾಲಿಗೆ ಎತ್ತಿ ಒಗೆದ ಸಂದರ್ಭದ ಆನಂದಾನು ಭೂತಿಯ ಅನಾವರಣ ಸಂಭ್ರಮವನ್ನು ಹಂಚಿಕೊಳ್ಳಲೆತ್ನಿಸಿದರೂ, ಬಾವುಕತೆಗೆ ಸೋತ ನಾಲಿಗೆ ತಡವರಿಸುತ್ತದೆ. ಅರಳಿದ ಹೃದಯ ಕಣ್ಣಿನಲ್ಲಿಯೇ ನಗು ಸೂಸುತ್ತದೆ.
“ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತ ಮತಿಗಳ್” ಎಂದೆನ್ನುವ ಈ ಯಲ್ಲಾಪುರ ಅಥವಾ ಎಲ್ಲಾ ಪುರದ, ಎಲ್ಲಾ ಸಮಾಜದ ಕನ್ನಡ ಮಕ್ಕಳೇ- ಸಂವೆದನೆಗೆ ವೈಚಾರಿಕತೆಯ ಲಾಗಾಮು ಇಲ್ಲದ ವಿಷಯಗಳನ್ನು ಹಂಚಿಕೊಳ್ಳಲೆತ್ನಿಸಿ ತಮ್ಮ ಸ್ಪಂದನವು ನನ್ನ ಅವಿಧೇಯತನವನ್ನೂ ಮನ್ನಿಸೂವಿರೆಂದರಿತು ಅವಗುಂಠನವನ್ನೂ ತೆರೆಯಲೆತ್ನಿಸಲೆ?

ಮೆಲ್ಲೆಲರಿಂ ಪೂತ ಕೊಳಂಗಳಿಂ ಕೆರೆಗಳಿಂ ಕಾಲೂರ್ಗಳಿಂ- ಕನ್ನಡ ಮೆನ್ನಿಪ್ಪನಾಡುಚೆಲ್ವಾಯ್ತು. ಎಂಬ ಅಂಡಯ್ಯನ ಮಾತು ಸಂಪೂರ್ಣವಾಗಿ ಯಲ್ಲಾಪುರಕ್ಕೆ ಅನ್ವಯಿಸುವುದು. ಉತ್ತರಕನ್ನಡ ಜಿಲ್ಲೆಯ ಕ್ಷೇತ್ರಮಾನದ ಹಿರಿಮೆಯಿಂದ ಅತೀವಿಸ್ತಾರವಾದ ತಾಲೂಕು ಇದು. ದಕ್ಷಿಣೋತ್ತರವಾಗಿ ತುಡುಗುಣಿಯಿಂದ ತಾಟವಾಳದವರೆಗೆ ಪೂರ್ವ ಪಶ್ಚಿಮವಾಗಿ ಕೊಡ್ಲಗದ್ದೆಯಿಂದ ಕಿರವತ್ತಿಯವರೆಗಿನ ಮಧ್ಯಭಾಗ ಮತ್ತು ಸಾತೋಡ್ಡಿಯಿಂದ ಶಿಡ್ಲಗುಂಡಿಯವರೆಗಿನ ವಿಸ್ತಾರವಾದ ಭೂಪ್ರದೇಶದ ನೈಸರ್ಗಿಕ ರಮ್ಯತೆ ಅನಾದೃಶ ವಾದದ್ದು. ಪ್ರಕೃತಿ ದತ್ತವಾದ ಬೆಟ್ಟ ಘೋರ ಕಾನನ, ಎತ್ತರದ ಅರಬೈಲು ಘಟ್ಟ ಪ್ರದೇಶ ನಡುವೆ ಝರಿ, ತೊರೆ, ಗಗನ ಚುಂಬಿ ಪರ್ವತಗಳು, ಪಾತಾಳಕ್ಕಿಳಿದಿರುವ ಕೊಳ್ಳಗಳು, ಕಾಳಿ-ಬೇಡ್ತಿ ಎಂಬ ಎರಡು ಪ್ರಮುಖ ನದಿಗಳು, ಇವುಗಳು ಈ ನದಿಗಳಿಗೆ ಸೇರುವ ಹಳ್ಳಗಳು ಮಾಡಿರುವ ಜಲ ಪಾತಗಳು, (ಅವು ಪ್ರಪಾತಗಳೆ) ವಿಶ್ವದಲ್ಲಿಯೇ ವೈಶಷ್ಟ್ಯವಾದವುಗಳೆಂದರೆ ಅತಿಶಯೋಕ್ತಿ ಅಲ್ಲ. ಸಾತೊಡಿ ಫಾಲ್ಸ ವರ್ಷವಿಡೀ ಭೋರ್ಗರೆವ ಹಳ್ಳದ ನಿನಾದ ಧುಮ್ಮುಕ್ಕುವ ಜಲಧಾರೆಯ ರಭಸ ಭಯ ಹುಟ್ಟಿಸುವಂತಹದು.



ಕವಿ ದ.ರಾ. ಬೇಂದ್ರೆಯವರು ಹೇಳಿದಂತೆ –

ಅದ್ಭುತ ಕರೆವುದು ಬಾ ಇಲ್ಲಿ
ಭಯ ಗದರಿಸುತಿದೆ ನಿಲ್ಲಲ್ಲಿ

ಎನ್ನುವಂತಿದೆ. ಅಷ್ಟೇ ಮೈನವಿರೇಳಿಸುವ ಮಾಗೋಡು ಜಲಪಾತ ಜಗತ್ಪ್ರ ಸಿದ್ಧವಾಗಿದೆ. ಕಂಚನಗದ್ದೆ ಫಾಲ್ಸು, ಅಜ್ಞಾತವೇ ಆಗಿರುವ ಎಮ್ಮೆಶಿರ್ಲು ಜಲಪಾತ ಈಗಾಗಲೇ ಮರೆಯಾಗಿರುವ ಲಾಲಗುಳಿ ಫಾಲ್ಸ, ಆಗಾಗ ಮಳೆಗಾಲದಲ್ಲಿ ಕಾಣಿಸುವ ಅರಬೈಲು ಜಲಪಾತಗಳು ಸದಾಕಾಲ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಮಾಗೋಡಿನ ಹತ್ತಿರವಿರುವ ಜೇನುಕಲ್ಲುಗುಡ್ಡ, ಸಿದ್ಧನ ಗುಡ್ಡಕ್ಕೆ ಹೋಗುವ ದಾರಿಯ ಹತ್ತಿರವಿರುವ ಗಿರಿಗಿರಿಗುಡ್ಡ, ಅದ್ಭುತವಾದ ಕಳಚೆಯ ಕಲ್ಲುಗಳು, ಹೆಬ್ಬಾರಕುಂಬ್ರಿಯಿಂದ ಸುತ್ತೆಲ್ಲ ಕಾಣಿಸುವ ಕೊಡಸಳ್ಳಿ ಜಲಾಶಯದ ಸುಂದರನೋಟ, ಕಾಶ್ಮೀರದ ಸೌಂದರ್ಯವನ್ನು ನೆನಪಿಸಿದರೆ ವನದೇವಿಯ ಬೈತಲೆಯ ನಡುವಿನಂತಿರುವ ಅರಬೈಲು ಘಟ್ಟದ ರಸ್ತೆ, ವಿಶ್ವದಲ್ಲಿಯೇ ಶ್ರೇಷ್ಠವಾದ ತೇಗು, ಹೊನ್ನೆ, ಬೀಟೆ, ಜಂಬೆಗಳ ವರಗಳಿಂದಲೂ ವಿಶೇಷವಾದ ಔಷಧಿ ಸಸ್ಯದಿಂದಲೂ ಕೂಡಿರುವ ಬೃಹದಾರಣ್ಯ ತಾಲೂಕಿನ ಪ್ರಾಕೃತಿಕ ಸೌಂದರ್ಯದ ಹಿರಿಮೆಯ ನಿದರ್ಶನಗಳಾಗಿವೆ.
 ಧಾರ್ಮಿಕವಾಗಿ ಪ್ರವಾಸೋದ್ಯಮಗೆ ಹೆಸರುವಾಸಿಯಾದದ್ದು ಯಲ್ಲಾಪುರ. ಇಲ್ಲಿನ ಗ್ರಾಮದೇವತೆಯರು ಜಗನ್ಮಾತೆ, ಕಾಳಮ್ಮ ದೇವಮ್ಮರು ಯಲ್ಲಾಪುರ ಐತಿಹಾಸಿಕ ಪೌರಾಣಿಕತೆಯ ಸಾಕ್ಷಿಗಳು 3 ವರ್ಷಕ್ಕೊಮ್ಮೆ ನಡೆಯುವ ಈ ದೇವಿಯರ ಜಾತ್ರೆ ಕರ್ನಾಟಕದ ಅತಿದೊಡ್ಡ ಜಾತ್ರೆಗಳಲ್ಲೊಂದಾಗಿದೆ. ಇದೇ ದೇವಿಯರ ಶಕ್ತಿ ಎನ್ನುವ ಮಾವಳ್ಳಿ ದೇವಿ ಜಾತ್ರೆಯೂ ಪ್ರಸಿದ್ಧವೇ. ಅಂತೆಯೇ ಶ್ರೀ ಕ್ಷೇತ್ರ ಕವಡಿಕೆರೆ ಭೀಮಸೇನನಿಂದ ಸ್ಥಾಪಿತ ಎನ್ನುವ ಪೌರಾಣಿಕ ಹಿನ್ನೆಲೆಯುಳ್ಳ ಕೌಡಮ್ಮಾದೇವಿ ದೇವಾಲಯ, ಮಂಚಿಕೇರಿ ಹತ್ತಿರದ ಕಂಪ್ಲಿಯ ಮಾರಿಕಾಂಬಾ ದೇವಸ್ಥಾನ. ಭರತನಹಳ್ಳಿಯ ಭ್ರಮರಾಂಬಾ ದೇವಸ್ಥಾನಗಳು ಮಾತೆಯರ ಸಾಂಗತ್ಯವಾದರೆ, ಹಿತ್ಲಳ್ಳಿ ಸಮೀಪದ ಹೊಳೆಮಹಾ ಗಣಪತಿ, ಪ್ರಸಿದ್ಧ ಘಂಟೆ ಗಣಪತಿಯ ಸನ್ನಿಧಿಯಾದ ಚಂದಗುಳಿ ವಿನಾಯಕನ ಸನ್ನಿಧಿ ಇಡಗುಂದಿ ಶ್ರೀರಾಮಲಿಂಗೇಶ್ವರ, ಅಣಲಗಾರದ ಗೋಪಾಲಕೃಷ್ಣದವರು ಪುರಾಣ ಪ್ರಸಿದ್ಧವಾಗಿದೆ. ಭಾವೈಕ್ಯತೆಯನ್ನು ಸಾರುವ ತಾಟವಾಳದ ಶ್ರೀ ರವಳನಾಥ ದೇವರು ಅಲ್ಲಿಯೇ ಇರುವ ದರ್ಗಾ ಹಿಂದೂ-ಮುಸ್ಲೀಮರವರಿಗೆ ಪ್ರಸಿದ್ಧ ಕ್ಷೇತ್ರಗಳಾಗಿವೆ. ವೀರಶೈವರ, ಜೈನರ, ಬೌದ್ಧರ, ದೇವಾಲಯಗಳೂ ತಾಲೂಕಿನಲ್ಲಿ ವಿರಾಜಮಾನವಾಗಿದ್ದು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿವೆ. ಕರ್ಮನಿಷ್ಟರೂ-ವಿದ್ವಾನರೂ ಆದ ತಾಲೂಕಿನ ವೈದಿಕವೃತ್ತಿಯವರೂ, ಧಾರ್ಮಿಕ ಕೈಂಕರ್ಯಕ್ಕೆ ಪೂಜೆ ಪುನಸ್ಕಾರಕ್ಕೆ ಸ್ವದೇಶವಲ್ಲದೆ ವಿದೇಶಗಳಲ್ಲೂ ಪ್ರಸಿದ್ಧಿ ಪಡೆದು ಹೊರರಾಜ್ಯಗಳಲ್ಲಿ ಸೇವೆಯಲ್ಲಿದ್ದು ಪ್ರಖ್ಯಾತರಾಗಿದ್ದಾರೆ. ತಾಲೂಕಿನ ಎಲ್ಲ ಜಾತಿಯ ಜನಗಳೂ ಸಾಕಷ್ಟು ಸಂಖ್ಯೆಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮಾದರಿಯಾಗಿದ್ದಾರೆ.



ಯಲ್ಲಾಪುರದ ಪ್ರಾಚೀನತೆ

 ಯಲ್ಲಾಪುರಕ್ಕೊಂದು ಅದ್ಭುತ ಇತಿಹಾಸವಿದೆ. ಇತಿಹಾರಕಾರ ಟಾಲೆಮಿಯು ಯಲ್ಲಾಪುರಕ್ಕೆ ಬಂದ ದಾಖಲೆಯಾಗಿ ಅವನ ಗ್ರಂಥದಲ್ಲಿ ಯಲ್ಲಾಪುರ ಮತ್ತು ಆನಗೋಡು ಹೆಸರನ್ನು ಉಲ್ಲೇಖಿಸಿದ್ದರ ಬಗ್ಗೆ ಧಾರವಾಡದ ಸುರೇಂದ್ರ ದಾನಿ ಎನ್ನುವವರು ಬರೆದಿರುತ್ತಾರೆ. ನಂತರ 2 ಶತಮಾನಗಳ ಹಿಂದೆ ಬಂದಿದ್ದ ಬೂಕಾನಿನ ಬರವಣಿಗೆಯಲ್ಲಿ ಯಲ್ಲಾಪುರದ ಅಂದಿನ ಸ್ಥಿತಿಗತಿ ವರ್ಣಿತವಾಗಿದೆ. ಅಡಿಕೆ, ತೆಂಗು, ಕಾಳು ಮೆಣಸು ಬೆಳೆಗಳು ಜಲಮಾರ್ಗದ ಮೂಲಕವಾಗಿಯೂ ಹೊರಗಡೆ ರಫ್ತಾಗುವುದನ್ನು ಅವರು ಸೂಚಿಸಿದ್ದಾರೆ. ಪೋರ್ಚುಗೀಸರ ಕಾಲದಲ್ಲಿ ಈಗ ಮುಳುಗಡೆಯಾಗಿರುವ ಬರಬಳ್ಳಿ-ಬೀರ್ಖೊಲ್ ಗಡಿಯಲ್ಲಿ ಆಗಿನ ಗೋವಾ ಸರ್ಕಾರದ ಹಣ ವಿನಿಮಯವಾಗುತ್ತಿದ್ದುದೂ ದಾಖಲೆಯಾಗಿದೆ.

ಹೋರಾಟದ ದಾರಿ

 ಯಲ್ಲಾಪುರ ಶತಮಾನಗಳ ಹಿಂದಿನಿಂದಲೂ ಹೋರಾಟಕ್ಕೆ ಹೆಸರುವಾಸಿ. 1799 ಕ್ಕೂ ಹಿಂದಿನಿಂದ ಟಿಪ್ಪೂಸುಲ್ತಾನನಿಂದ ಸಾಕಷ್ಟು ತೊಂದರೆಯಾಗಿ ಸೋಂದಾ ರಾಜ್ಯವು ಪತನಗೊಂಡು ನಂತರ ಯಲ್ಲಾಪುರ ಬ್ರಿಟಿಷರ ಸುಪರ್ದಿಗೆ ಬಂದಿತು. ಆಗ ಉತ್ತರ-ದಕ್ಷಿಣ ಕನ್ನಡ ಜಿಲ್ಲೆ ಒಂದೇ ಆಗಿತ್ತು. ಸುಮಾರು 60 ವರ್ಷಗಳ ನಂತರ ಜಿಲ್ಲೆ ವಿಭಾಗವಾಗಿ ಉತ್ತರಕನ್ನಡ ಜಿಲ್ಲೆ ಮುಂಬೈ ಪ್ರಾಂತಕ್ಕೂ ದಕ್ಷಿಣ ಕನ್ನಡ ಜಿಲ್ಲೆ ಮದ್ರಾಸ ಸೇರ್ಪಡೆಯಾಯಿತು. ಆವಾಗಲೇ 1867ರಲ್ಲಿಯೇ ಹುಬ್ಬಳ್ಳಿ-ಕಾರವಾರ ರೈಲು ಮಾರ್ಗದ ಸಮೀಕ್ಷೆ ನಡೆದಿದೆ ಎನ್ನುವ ದಾಖಲೆ ಸಿಗುತ್ತದೆ. ಸ್ವಾಂತಂತ್ರ್ಯ ಹೋರಾಟದ ಕಹಳೆ ಆಗಲೇ ಯಲ್ಲಾಪುರ ತಾಲೂಕಿನಲ್ಲಿ ಮೊಳಗಿತ್ತು. ಯಲ್ಲಾಪುರ ತಾಲೂಕಿನ ನಾಗರಖಾನ ಗ್ರಾಮದ ವಡ್ರಮನೆಯಲ್ಲಿದ್ದ ಬಸ್ತ್ಯಾಂವ ಎನ್ನುವ ಸಿದ್ಧಿ ಯುವಕ ಬ್ರಿಟಿಷರ ವಿರುದ್ಧ ತನ್ನ ಸಂಗಡಿಗರಾದ ಸುಫಾದ ಜಗಲಪೇಟದ ಹೋರಾಟಗಾರರೊಡನೆ ಸೇರಿ ಸರಕಾರದ ವಿರುದ್ಧ ಬಂಡಾಯವೆದ್ದ ಸಂಗತಿ ದಾಖಲೆಯಲ್ಲಿದೆ. (ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆಯವರು ವಿಜಯವಾಣಿ ಪತ್ರಿಕೆಯಲ್ಲಿ ಬರೆದಿದ್ದಾರೆ) ಮುಂದೆ ಸ್ವಾತಂತ್ರ್ಯ ಹೋರಾಟದ ಕಿಚ್ಚು ಆವರಿಸಿದಾಗ ಸ್ವಾತಂತ್ರ್ಯ ಹೋರಾಟಗಾರರಾದ ಮಹಾತ್ಮಗಾಂಧಿಯವರ ದೇಹಳ್ಳಿಯ ಮುದ್ದೆಪಾಲು- ವಿಶ್ವೇಶ್ವರ (ಮುದ್ದೆಪಾಲು ವಿಶ್ವ) ಎನ್ನುವವರು 1933ನೇಯ ಇಸವಿಯ ವೈಯಕ್ತಿಕ ಸತ್ಯಾಗ್ರಹಕ್ಕೆ ಇಡೀ ಜಿಲ್ಲೆಯ ಪ್ರಥಮ ಸತ್ಯಾಗ್ರಹ ಎಂದು ಮಹಾತ್ಮಾಗಾಂಧಿಯವರ ಸ್ವಹಸ್ತಾಕ್ಷರದ ಆದೇಶ ಪಡೆದು ಸತ್ಯಾಗ್ರಹದಲ್ಲಿ ಭಾಗವಹಿಸಿದ್ದು ಇಡೀ ತಾಲೂಕಿಗೆ ಜಿಲ್ಲೆಗೆ ಹೆಮ್ಮೆಯ ವಿಷಯ. ಅಂತೆಯೇ ಉಪ್ಪಿನ ಸತ್ಯಾಗ್ರಹ ಕರನಿರಾಕರಣೆ ಕಾಯಿದೆ ಭಂಗ, ಕ್ವಿಟ್ ಇಂಡಿಯಾ ಚಳುವಳಿಗಳಲ್ಲಿ ಸತ್ಯಾಗ್ರಹ ಮಾಡಿ ಜೈಲು ಪಾಲಾದವರ ಸಂಖ್ಯೆಯೂ ದೊಡ್ಡದಿದೆ. ಯಾವುದೇ ಜಾತಿಬೇಧವಿಲ್ಲದೆ ಹಿಂದೂ, ಮುಸ್ಲೀಮರು ಮತ್ತು ಕಳಚೆಯಂಥ ಗ್ರಾಮದಿಂದ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಬಾವುಟ ಹಿಡಿದು ಹೋರಾಟದಲ್ಲಿ ಪಾಲ್ಗೊಂಡಿದ್ದು ವಿಶೇಷ. ಮುಂದೆಯೂ ಸ್ವಾತಂತ್ರ್ಯ ನಂತರವೂ ಕರ್ನಾಟಕ ಏಕೀಕರಣವಾಗುವವರೆಗೆ ಮುಂಬೈ ಕರ್ನಾಟಕ ಟೆನೆನ್ಸಿ ಕಾಯ್ದೆ ವಿರುದ್ಧವೂ ಜನ ರೋರಾಡಿದ್ದಾರೆ. ಕರ್ನಾಟಕ ಏಕೀಕರಣದ ನಂತರವೂ ಪರಿಸರ ರಕ್ಷಣೆ, ಮುಳುಗಡೆ ಮತ್ತು ಗಣಿಗಾರಿಕೆ ವಿರುದ್ಧವೂ ಪ್ರಬಲ ಹೋರಾಟ ನಡೆದಿದೆ. ಅದರಲ್ಲಿಯೂ ಕಾಳಿ ಆಣೆಕಟ್ಟೆಯ ಕೊಡಸಳ್ಳಿ ನಿರ್ವಸಿತರ ಹೋರಾಟ, ಹಸಿರು ಸ್ವಾಮಿ ಎಂದು ಪ್ರಖ್ಯಾತರಾದ ಶ್ರೀ ಸ್ವರ್ಣವಲ್ಲೀ ಗಂಗಾಧರೇಂದ್ರ ಸ್ವಾಮಿಗಳ ಬೇಡ್ತಿ ವಿರುದ್ಧದ ಹೋರಾಟ ಬೃಹತ್ ಪಾದಯಾತ್ರೆ, ಐತಿಹಾಸಿಕ ದಾಖಲೆಯಾಗಿ ಯಶಸ್ವಿಯೂ ಆಗಿ ತೂಗುಗತ್ತಿಯ ಭಯ ನಿವಾರಣೆ ಆಗಿ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಮತ್ತು ಕೈಗಾ ಹೋರಾಟ, ಬೀಸಗೋಡ ಗಣಿ ಹೋರಾಟ ಪ್ರಮುಖವಾದರೆ, ಹುಬ್ಬಳ್ಳಿ-ಅಂಕೋಲಾ ರೈಲಿನ ಬಗ್ಗೆ ಹೋರಾಟ ಇನ್ನೂ ಇದೆ. ಈಗಲೂ ನಿರಾಶ್ರಿತರ ಸಮಸ್ಯೆ, ಸೂಕ್ಷ್ಮ ಪರಿಸರ ವಲಯದಂತಹ ಸಮಸ್ಯೆ, ಗಣೇಶಪಾಲ ಯೋಜನೆ ವಿರುದ್ಧವೂ ಪ್ರತಿಭಟನೆ ಇದೆ.



ತಾಲೂಕಿನ ಹಿರಿಯ ಸಾಧಕರು, ಸಂಘ ಸಂಸ್ಥೆಗಳು

 ಮಾತುಗಳು ಸುದೀರ್ಘ ಎನ್ನಿಸಿದರೂ ತಾಲೂಕಿನ ಸಾಹಿತ್ಯ ಸರಸ್ವತಿಯ ಮಂದಿರಕ್ಕೆ ಕಾಲಿಡುವ ಮುನ್ನ ಸಾಧಕರ ಬಗ್ಗೆ ಹೇಳದಿದ್ದರೆ ಆತ್ಮವಂಚನೆಯಾದೀತು. ಈ ತಾಲೂಕಿನಲ್ಲಿ ಅದ್ಭುತ ಕಲಾಕಾರರು, ನೃತ್ಯಪಟುಗಳೂ, ಸಂಗೀತ ವಿದ್ವಾಂಸರೂ, ಕ್ರೀಡಾಪಟುಗಳು, ಜಾನಪದ ಕಲಾವಿದರು, ಕವಿಗಳು ಹೀಗೆ ಎಲ್ಲ ವಿಧದ ಪ್ರತಿಭಾ ಸಂಪನ್ನರಿದ್ದಾರೆ.

 ವಿಶೇಷತ: ಉಲ್ಲೇಖನೀಯವಾಗಿ ಅಂತಾರಾಷ್ಟ್ರೀಯ ಮಟ್ಟದ ಶ್ರೀಗಂಧದ ಕೆತ್ತನೆಕೆಲಸದ ಶ್ರೀ ಬಿಕ್ಕು ಗುಡಿಗಾರ ಕುಟುಂಬದವರಿದ್ದಾರೆ. ಕೇಂದ್ರ ಮಂತ್ರಿ ಶ್ರೀಪಾದ ನಾಯಕರು ಇವರಲ್ಲಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹೊರದೇಶದ ಮತ್ತು ದಿಲ್ಲಿಯ ದೇವಸ್ಥಾನಕ್ಕೆ ಕೆತ್ತನೆ ದ್ವಾರದ ವಿಶೇಷತೆ ಇವರದು. ಮಣ್ಣಿನ ಮೂರ್ತಿ ರಚನೆಯಲ್ಲಿ ಈ ವಿಶ್ವಕರ್ಮ ಸಮಾಜದವರದ್ದು ಎತ್ತಿದ ಕೈ. ಇಲ್ಲಿ ಬಂಗಾರದ ಕೆಲಸದ ದೈವಜ್ಞರು ಸೂಕ್ಷ್ಮ ಕುಸುರಿಕಲೆಗೆ ಹೆಸರಾದರು. ಕಾರವಾರದ ಜ್ಯುವೆಲ್ಲರಿ ಪಾರ್ಕನಲ್ಲೂ ದೂರದ ಕಲಬುರ್ಗಿ ಸಾಂಗ್ಲಿ, ಮೀರಜದಲ್ಲೂ ಇವರ ಆಭರಣದ ವಿನ್ಯಾಸ ಮಿನುಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಕ್ರೀಡಾಪಟುಗಳು ಯಲ್ಲಾಪುರದಲ್ಲಿದ್ದಾರೆ. ಇಲ್ಲಿನ ಅನು ಕಾಮತ ಎನ್ನುವವರು ಕ್ರೀಡೆಯಲ್ಲಿ ಚೀನಾ ದೇಶದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ ಮತ್ತು ದಯಾ ಕಾರಂತ, ತಾಂಡುರಾಯನ್ನರು ರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಜಯಶಾಲಿಗಳಿದ್ದಾರೆ. ರಾಜ್ಯ ಮಟ್ಟದ ಮುದುಕರ ಕ್ರೀಡೆಗಳಲ್ಲಿ ಶ್ರೀ ಬಿ.ಜಿ.ಹೆಗಡೆ ಮತ್ತು ಸಂಗಡಿಗರು ಭಾಗವಹಿಸಿ ಈಗಲೂ ಪ್ರಶಸ್ತಿ ಪಡೆಯುತ್ತಿದ್ದಾರೆ. ಕೊಡಸೆ, ಅರಬೈಲು, ಕಿರವತ್ತಿಯ ಪ್ರತಿಭಾನ್ವಿತ ಸಿದ್ಧಿ, ಮರಾಠಿ ಜನಾಂಗದ ಕ್ರೀಡಾಳುಗಳು ರಾಷ್ಟ್ರಮಟ್ಟಕ್ಕೆ ಹೋಗಿದ್ದಾರೆ. ರಾಜ್ಯ ರಾಷ್ಟ್ರಮಟ್ಟದಲ್ಲಿ ಮೆಮರಿ ಪವರ್ (ನೆನಪಿನ ಶಕ್ತಿಯ) ಬೋಧಕರಾದ ಶ್ರೀ ಯೋಗೀಶ್ ಶಾನಭಾಗರದು ವಿಶಿಷ್ಟ ವ್ಯಕ್ತಿತ್ವ. ಝೀ ಕನ್ನಡದ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಜಯಗಳಿಸಿ ಹೆಸರುವಾಸಿಯಾದ ಗಗನ್ ಎನ್ನುವ ಬಾಲಕ ತಾಲೂಕಿನ ಬೀಗಾರ ಗ್ರಾಮದವನು. ಅದೇ ಬೀಗಾರಿನ ಉತ್ಸಾಹಿ ಯುವಕ ನರಸಿಂಹ ಕೋಮಾರರು ಐ.ಪಿ.ಎಸ್. ಅಧಿಕಾರಿಯಾಗಿ ದೂರದ ಗುಜರಾತಿನಲ್ಲಿ ನೆಲೆಸಿ ತಾಲೂಕಿಗೆ ಕೀರ್ತಿ ತಂದಿದ್ದಾರೆ. ಕಾರವಾರದ ಜಿಲ್ಲಾ ಪಂಚಾಯತ ಸಿ.ಇ.ಓ. ಆಗಿರುವ ಸಂಗೀತಾ ಭಟ್ಟ ತಾಲೂಕಿನ ಕೆ.ಎ.ಎಸ್. ಮುಗಿಸಿದ ಪ್ರಥಮ ಮಹಿಳೆ, ಅಂತೆಯೇ ಕೇಂದ್ರ ಸರಕಾರದ ಸೇವೆಯಲ್ಲಿರುವ ಬಿದ್ರೆಪಾಲಿನ ಯುವಕ ಮತ್ತು ಮುದ್ದೇಪಾಲು ರಾಮಕೃಷ್ಣ ಐ.ಎ.ಎಸ್. ಅಧಿಕಾರಿಗಳು. ಹಾಸನದ ಜಿಲ್ಲಾ ನ್ಯಾಯಾಧೀಶ, ಬರಬಳ್ಳಿ ಸಂತೋಷಭಟ್ಟರು. ಬೆಂಗಳೂರಿನಲ್ಲಿ ಜಿಲ್ಲಾ ನ್ಯಾಯಾಧೀಶ ಶ್ರೀ ಗುರುನಾಥ ರೇವಣಕರರು, ನೋಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿಗಳ ಜೊತೆ ಕೆಲಸ ಮಾಡುತ್ತಿರುವ ಮಿಲಿಂದ ರಂಗೈ ಶೆಣವಿಯವರು. ನ್ಯಾಯಾಧೀಶ ಶ್ರೀ ಜಿ. ವಿ. ಭಟ್ಟ ಬಾಳೆಕಲ್ಲರವರು, ಉಚ್ಛ ನ್ಯಾಯಾಲಯದ ಎ.ಜಿ.ಡಿ. ಸಂಜಯ ಭಟ್ಟ ಕಣ್ಣಿ ಮತ್ತು ಇತರೆ ಪ್ರಸಿದ್ಧರು. ಯಲ್ಲಾಪುರದ ಕೀರ್ತಿ ಪತಾಕೆ ಎತ್ತಿ ಹಿಡಿದಿದ್ದಾರೆ. ಈ ಸಾಲಿಗೆ ಎಂಥಹ ಸಂದರ್ಭದಲ್ಲಿಯೂ ಸ್ವಪ್ರಯತ್ನದಿಂದ ನೀರು ಪೂರೈಸುವ ಮಂಚಿಕೇರಿಯ ಮಂಜ ನಾಯಕ ವಿಶಿಷ್ಟ ಹಸ್ತಗುಣದ ಗೇರಕುಂಟೆ ನಾರಾಯಣ ಭಟ್ಟರು, ಯೋಗ ವೈದ್ಯ ಶಿರವಳ್ಳಿ ಕೃಷ್ಣ ಭಟ್ಟರೂ ಸೇರುತ್ತಾರೆ. ಜಿಲ್ಲೆಯಲ್ಲಿಯೇ ಯಲ್ಲಾಪುರದವರ ವೈದ್ಯಕೀಯ ಶುಲ್ಕ ಅತಿ ಕಡಿಮೆ ಇದೆ. ದಿವಂಗತ ಜಿ.ಪಿ.ಭಟ್ಟ ಮದ್ಗುಣಿ, ಪ್ರಾತ: ಸಮರಣೀಯರು.



ಜಾನಪದ ಜಗತ್ತು

 ಜಾನಪದ ಕಲೆಗಳಲ್ಲಿ ಹೆಸರುವಾಸಿಯಾಗಿರುವ ಕಲಾವಿದರು-ಕಲಾತಂಡಗಳು ಬಹಳವಿದೆ. ಅವುಗಳಲ್ಲಿ ಇಲ್ಲಿನ ಮರಾಠಿ ಸಮುದಾಯದ ಸುಗ್ಗಿಕುಣಿತ, ಗುಮಟೆಪಾಂಗು, ಪುಗಡಿನೃತ್ಯ, ಜಾತ್ರೆ ವೇಳೆಯ ಮಂಗಳಾರತಿ ಭಜನೆ ಪ್ರಮುಖವಾಗಿವೆ. ಅಪರೂಪವಾಗಿರುವ ಮರಾಠಿ ಬಯಲಾಟಗಳು, ಇಲ್ಲಿನ ಗುಡ್ಡಗಾಡು ವಾಸಿಗಳಾದ ಸಿದ್ಧಿ ಜನಾಂಗದ ವಿಶಿಷ್ಟಕಲೆ, ಢಮಾಮಿ ನೃತ್ಯ ಮತ್ತು ಅಲಿಗುಮನೃತ್ಯ ಈ ಎರಡು ಕುಣಿತಗಳು ಯಲ್ಲಾಪುರದ ಅರಬೈಲ್, ಲಾಲಗುಳಿಗಳಲ್ಲಿ ವಿಷೇಶ ಪ್ರಚಾರದಲ್ಲಿವೆ ಎಂದು ಆರ್.ಪಿ.ಹೆಗಡೆ ಸುಳಗಾರ ಮತ್ತು ಪ್ರಸಿದ್ಧ ವಿದ್ವಾಂಸ ಕುಮಟಾದ, ಎಲ್.ಆರ್.ಹೆಗಡೆ ಬರೆಯುತ್ತಾರೆ. ಜೊತೆಗೆ ಸಿದ್ಧಿಯರ ಯಕ್ಷಗಾನವೇ ಆಗಿರುವ ಸಂಗ್ಯಾ-ಬಾಳ್ಯಾ ಜನಪದ ನೃತ್ಯ ಸುಗ್ಗಿಯ ಕಾಲದಲ್ಲಿ ಪ್ರದರ್ಶಿತವಾಗುವುದು. ಆದರೆ ಇತ್ತೀಚಿನ ದಿನಗಳಲ್ಲಿ ಈ ಕುಣಿತದ ಪ್ರದರ್ಶನ ಕಡಿಮೆಯಾಗುತ್ತಿದೆ. ಇದರ ಪುನರುಜ್ಜೀವನ ಆಗಬೇಕು, ಸಿದ್ಧಿಜನ ಅದನ್ನು ಬದುಕಿಸಬೇಕು. ಅಂತೆಯೇ ವೀರಗಾಸೆ ಕುಣಿತ, ಒಡಪುಗಳು, ಏಕಲಾರಿ, ಗಿಗಿಪದ, ಮುಸ್ಲೀಮರ ಹಬ್ಬದ ಹಾಡುಗಳು ಪ್ರಚಾರದಲ್ಲಿದ್ದು ಜಾನಪದ ಪ್ರಪಂಚ ಸಿರಿವಂತವಾಗಿದೆ.

ಕಲಾ ಜಗತ್ತು

 ಕಲಾವಿದರನ್ನು, ಸಾಹಿತಿಗಳನ್ನು ಗುರುತಿಸುವಾಗ ವಿಷ್ಣು ನಾಯ್ಕರು ಸಾಹಿತ್ಯ ಸಮ್ಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದ ಮಾತುಗಳನ್ನು ನೆನಪಿಸುತ್ತೇನೆ. ಇಲ್ಲಿನ ಕಲಾವಿದರು ಸಾಹಿತಿಗಳನ್ನು ಮೂರು ವಿಧವಾಗಿ ನೋಡಬೇಕು. 1] ತಲೆಮಾರುಗಳಿಂದ ಇಲ್ಲಿಯೇ ಇದ್ದು ಸೇವೆ ಸಲ್ಲಿಸುವವರು. 2] ಇಲ್ಲಿಯವರಾಗಿ ಹೊರಗಡೆ ಜೀವನ ವೃತ್ತಿಗೆ ಹೋಗಿ ಪ್ರಸಿದ್ಧಿಗೆ ಬಂದವರು. 3] ಹೊರಗಿನಿಂದ ಬಂದು ಇಲ್ಲಿ ನೆಲೆಸಿಕೊಂಡು ಜೀವನ ಸಾಗಿಸುವವರು. ಹೀಗೆಯೇ ವಿಭಾಗಿಸಬಹುದು.
ಕಲೆಗಳಲ್ಲಿ ರಂಗ ಕಲೆ ಪ್ರಮುಖವಾದ ನಾಟಕಗಳು
 ಯಲ್ಲಾಪುರ ಮತ್ತು ಗ್ರಾಮೀಣ ಭಾಗಗಳಲ್ಲಿ ಹಿಂದಿನಿಂದಲೂ ರಂಗನಾಟಕಗಳು ಚಾಲ್ತಿಯಲ್ಲಿದ್ದು ಇಂದಿಗೂ ಪ್ರಸ್ತುತವಾಗಿವೆ. ಯಲ್ಲಾಪುರದ ಪ್ರಸಿದ್ಧ ರಂಗ ನಟಿ ಸುಮತಿಶ್ರೀ ವೃತ್ತಿ ನಾಟಕ ಮಂಡಳಿ ಸೇರಿ ವಿಶೇಷ ಪ್ರಶಸ್ತಿ ಪಡೆದು ರಾಜ್ಯಾದ್ಯಂತ ಹೆಸರುವಾಸಿಯಾಗಿದ್ದಾರೆ. ಅವರ ದೇವಿ ಮಹಾತ್ಮೆ ನಾಟಕವು ರಾಜ್ಯಾದ್ಯಂತ ಅಭಿನಯಿಸಲ್ಪಡುತ್ತಿದೆ. ಯಲ್ಲಾಪುರ-ಶಿರಸಿ ದೇವಿ ಜಾತ್ರೆಯಲ್ಲೂ ವಿಶೇಷವಾಗಿ ಪ್ರದರ್ಶಿಸಲಾಗುತ್ತಿದೆ. ಸುಮಾರು 50 ವರ್ಷಗಳಿಂದ ನಾಟಕಾಭಿನಯಕ್ಕಾಗಿ ಹುಟ್ಟಿಕೊಂಡು ಸ್ವತಂತ್ರ, ಸುಸಜ್ಜಿತ ವ್ಯವಸ್ಥೆಯಿಂದ ಇಲ್ಲಿಯವರೆಗೆ ನಾಟಕ ಪ್ರಯೋಗಿಸುತ್ತಾ ಬಂದಿರುತ್ತಾರೆ. ಹವ್ಯಾಸಿ ನಾಟಕ ಮಂಡಳಿಗಳು ತಾಲೂಕಿನಲ್ಲಿ ವ್ಯಾಪಕವಾಗಿವೆ. ಅವುಗಳಲ್ಲಿ ಶ್ರೀ ವಿಜಯ ವಿನಾಯಕ ನಾಟಕ ಸಂಘ ಬರಬಳ್ಳಿ [ಸದ್ಯ ಅಂಕೋಲಾ ತಾಲೂಕಿನ ಹೆಗ್ಗಾರಿನಲ್ಲಿ ಪುನರ್ವಸತಿ ಪ್ರದಶದಲ್ಲಿದೆ] ದೇಹಳ್ಳಿಯ ಬಳಗಾರಿನ ನಾಟಕ ಸಂಘ, ಕಳಚೆ, ಮಾವಳ್ಳಿಯ ನಾಟಕ ಸಂಘವಲ್ಲದೆ ಯಲ್ಲಾಪುರದಲ್ಲಿ ಸ್ವತ: ರಂಗಕರ್ಮಿಯಾದ ಶ್ರೀ ಡಿ. ಎನ್. ಗಾಂವ್ಕರರ ರಂಗ ಸಹ್ಯಾದ್ರಿ, ಮಂಚಿಕೇರಿಯ ಅಭಿನಯ ಪಟುಗಳಾದ ಶ್ರೀ ರಾಮಕೃಷ್ಣ ದುಂಡಿ, ಶ್ರೀ ಜಿ.ಟಿ.ಭಟ್ಟರು ಬೊಮ್ಮನಳ್ಳಿ, ಶ್ರೀ ವಿ. ಎನ್. ಶಾಸ್ತ್ರಿ ಮುಂತಾದವರ ನಿರ್ದೇಶನದಲ್ಲಿ ಪ್ರಬುದ್ಧವಾಗಿ ಅಭಿನಯಿಸಲ್ಪಡುವ ನಿನಾಸಂ ನಾಟಕಗಳ ಪ್ರದರ್ಶನ ವೇದಿಕೆ ಶ್ರೀ ರಾಜರಾಜೇಶ್ವರಿ ನಾಟಕ ಸಂಸ್ಥೆಯ ಕೊಡುಗೆ ಅಪಾರ. ಈ ಸಂಸ್ಥೆಯಲ್ಲಿ ಹಿಂದುಳಿದ ಸಿದ್ಧಿ, ಕುಣಬಿ, ಗೌಡ ಜನಾಂಗದವರು ಪಾಲ್ಗೊಂಡು ಕಲಾ ಪ್ರತಿಭೆ ತೋರುತ್ತಿರುವುದು ಸ್ತುತ್ಯಾರ್ಹ. ರಂಗ ನಟರಾಗಿ ಮಿಂಚುತ್ತಿರುವ ಶ್ರೀ ಜೈರಾಮ ಭಟ್ಟ ಮಲವಳ್ಳಿ ಸಂಸ್ಕøತ ನಾಟಕಗಳು ದೂರದರ್ಶನಕ್ಕೆ ಕೊಂಡೊಯ್ದ ಶ್ರೀ ಡಿ. ಶಂಕರ ಭಟ್ಟ, ಶ್ರೀಮತಿ ಲಕ್ಷ್ಮೀ ಭಟ್ಟ ಚಿಮನಳ್ಳಿ, ಹೊಸ ಕಲಾವಿದ ಶ್ರೀಪಾದ ಮೆಣಸುಮನೆ ಮತ್ತು ಕಿರವತ್ತಿಯ ಕಲಾವಿದರು ನಾಟಕಗಳ ಕಣಜ ತುಂಬಿದ್ದಾರೆ.
 ನಾಟಕ ರಚನೆಕಾರರು ಸದ್ಯ ನಾಯ್ಕನಕೆರೆಯ ದತ್ತ ಮಂದಿರದಲ್ಲಿರುವ ಶ್ರೀ ಸೀತಾರಾಮ ಹೆಗಡೆಯವರು ಪೌರಾಣಿಕ ಕತೃಗಳು ಮತ್ತು ಉತ್ತಮ ರಂಗನಟರು ಇವರ ಟಿಪ್ಪು ಸುಲ್ತಾನ ನಾಟಕದ ಮೀರಸಾದಿಕ್ನವ ಪಾತ್ರ ಜಿಲ್ಲೆಯಾದ್ಯಂತ ಹೆಸರುವಾಸಿಯಾಗಿದೆ. ಹಳೆಯ ತಲೆಮಾರಿನ ಅನುಭವಿ ಲೇಖಕರಾದ ದಿ. ಶ್ರೀ ಜಿ. ಜಿ. ಹೆಗಡೆ ಸುಳಗಾರ ರವರು ಸಂಯುಕ್ತ ಕರ್ನಾಟಕ ಹುಬ್ಬಳ್ಳಿ ದಿನಪತ್ರಿಕೆ ಕಾರ್ಯಾಲಯದಲ್ಲಿ ಕೆಲಸದಲ್ಲಿದ್ದು ಸುಮಾರು 20 ಏಕಾಂಕ ನಾಟಕ ಬರೆದು ಪ್ರಕಟಿಸಿದ್ದಾರೆ. ಶ್ರೀ ನಾ. ಸು. ಭರತನಹಳ್ಳಿ, ಶ್ರೀ ವನರಾಗ ಶರ್ಮಾ, ದಿ|| ಶ್ರೀ ಜಿ. ವಿ. ಗಾಂವ್ಕರ ಬಾಗಿನಕಟ್ಟಾ, ಶ್ರೀ ಗ. ರಾ. ಭಟ್ಟ, ಶ್ರೀ ಗಣೇಶ ಪಿ. ನಾಡೋರ ರವರು ನಾಟಕ ರಚಿಸಿದ್ದಾರೆ. ಶ್ರೀ ಟಿ.ವಿ. ಕುಮಾರ ಬಾಗಿನಕಟ್ಟಾ ಅವರು ಹಲವಾರು ರಂಗನಾಟಕ ಬರೆದು ಪ್ರಯೋಗಿಸಿ ಸ್ವತ: ನಿರ್ದೇಶಿಸಿ ಪ್ರಖ್ಯಾತರಾದವರು. ಮಕ್ಕಳ ನಾಟಕ ಶ್ರೀ ತಮ್ಮಣ್ಣ ಬೀಗಾರ, ಶ್ರೀಮತಿ ಯಮುನಾ ನಾಯ್ಕ ರಂತವರಿದ್ದಾರೆ. ಶ್ರೀ ರಾ. ಭ. ಹಾಸಣಗಿ ರವರು ಬಹಳ ಮೊದಲೇ ಯಕ್ಷ ನಾಟಕ, ಯಕ್ಷಗಾನದ ಬಗ್ಗೆ ಪುಸ್ತಕ ಬರೆದಿದ್ದಾರೆ. ಇವರ ಬಗ್ಗೆ ಕನ್ನಡದ ಯಕ್ಷಗಾನದ ಬಗ್ಗೆ ಬರೆದ ಮೊದಲ ಸಂಶೋಧನಾ ಗ್ರಂಥ ಎಂದು ಖ್ಯಾತ ವಿಮರ್ಶಕ ಸಾಹಿತಿ ಶ್ರೀ ಪುರುಷೋತ್ತಮ ಬಿಳಿಮನೆ ರವರು ಬರೆದಿರುತ್ತಾರೆ.



ಶಿಕ್ಷಣ ಕ್ಷೇತ್ರ ಕೀರ್ತಿಭಾಜನರು

 ಸುಮಾರು 60 ವರ್ಷಗಳ ಹಿಂದೆ ಪ್ರಾರಂಭಿಸಲ್ಪಟ್ಟ ಯಲ್ಲಾಪುರ ತಾಲೂಕಾ ಶಿಕ್ಷಣ ಸಂಸ್ಥೆ ವೈ.ಟಿ.ಎಸ್.ಎಸ್. ಈಗಾಗಲೇ ಸ್ವರ್ಣ ಮಹೋತ್ಸವ ಆಚರಿಸಿಕೊಂಡಿದೆ. ಕೆಲವು ಪ್ರಾಥಮಿಕ ಶಾಲೆ, ಮಾಧ್ಯಮಿಕ, ಪ್ರೌಢಶಾಲೆ ಪದವಿಪೂರ್ವ ವಿದ್ಯಾಲಯಗಳು ಇದರ ಅಡಿಯಲ್ಲಿವೆ. ಅನುಭವಿ ಶಿಕ್ಷಣ ವೃಂದದವರಿಂದ ಬೋಧಿಸಲ್ಪಡುವ ಈ ವಿದ್ಯಾಲಯದಲ್ಲಿ ಓದಿದ ಹಲವಾರು ಜೀವನ ಎಲ್ಲ ಕ್ಷೇತ್ರಗಳಲ್ಲಿ ಹೆಸರು ಹಳಿಸಿ ದೇಶವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಈ ಸಂದರ್ಭದಲ್ಲಿ ಈ ಶಿಕ್ಷಣ ಸಂಸ್ಥೆ ಕಟ್ಟಿ ನಿಲ್ಲಿಸಿದ ಶಿಕ್ಷಣ ಪ್ರೇಮಿ ದಿ|| ಬಾಬುರಾವ್ ಬಿಕ್ಕು ಭಟ್ಟ ರವರನ್ನು ಶ್ರೀ ನಾಗೇಶ ಶಾನಭಾಗ, ಲಕ್ಷ್ಮಣ ಶಾನಭಾಗ ರನ್ನು ಹೈಸ್ಕೂಲಿನ ಪ್ರಥಮ ಮುಖ್ಯೋಪಾಧ್ಯಾಯರಾಗಿ ಶ್ರೀ ವಿ. ಆರ್. ಪರಮಾನಂದರನ್ನು ನೆನಸಲೇಬೇಕಾಗಿದೆ. ಅಂತೆಯೇ ವಿ.ವಿ.ಮಂತ್ರಿಯವರು ಸ್ಮರಣಾರ್ಹರು. ಅಂತೆಯೇ ಮಂಚಿಕೇರಿಯ ರಾ.ರಾ. ವಿದ್ಯಾಸಂಸ್ಥೆ, ಇಡಗುಂದಿ- ಯಲ್ಲಾಪುರ ವಿಶ್ವದರ್ಶನ, ಸ್ನೇಹಸಾಗರ ಶಾಲೆಗಳಲ್ಲದೇ ಸರ್ವೋದಯ ವಜ್ರಳ್ಳಿಗಳಲ್ಲದೆ ಹಲವಾರು ಸರಕಾರಿ ಶಾಲೆ-ಕಾಲೇಜುಗಳಿವೆ.

ಹೆಮ್ಮೆಯ ಸಂಸ್ಕøತ ವಿದ್ಯಾಲಯ

 ತಾಲೂಕಿನಲ್ಲಿ ವೈದ್ಯಕೀಯ ಶಿಕ್ಷಣ ಸಂಸ್ಥೆಗಳು ಕೆಲವಿವೆ. ಉಲ್ಲೇಖಿಸಲೇಬೇಕಾದ ವಿದ್ಯಾಲಯವೆಂದರೆ ಉಮ್ಮಚಗಿಯ ಶ್ರೀ ಮಾತಾ ವೇದ ಸಂಸ್ಕøತ ಮಹಾವಿದ್ಯಾಲಯ ಪ್ರಾರಂಭದಿಂದಲೂ ಹೆಸರುವಾಸಿಯಾದ ಈ ವಿದ್ಯಾ ಸಂಸ್ಥೆ ಇಂದಿನವರೆಗೂ ತನ್ನ ಹೆಸರನ್ನು ವೃದ್ಧಿಸಿಕೊಳ್ಳುತ್ತಲೇ ಬಂದಿದೆ. ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಪಡೆದಿದ್ದಾರೆ, ಕೆಲಸ ಮಾಡುತ್ತಿದ್ದಾರೆ. ಶ್ರೀಯುತ ಕೋಟೆಮನೆ ರಾಮಚಂದ್ರ ಭಟ್ಟರು ಸರ್ವ ಪ್ರಾವೀಣ್ಯ ಪಂಡಿತರಾಗಿ ಹಲವು ದೇಶ ಸುತ್ತಿ ಅಧ್ಯಾಪಕರಾಗಿ ಈಗ ಸದ್ಯ ಗುರುಕುಲ ಪೀಠಂ ವಿದ್ಯಾಕೇಂದ್ರ ಸ್ಥಾಪಿಸಿ ದೇಶವಿದೇಶಿಯ ವಿದ್ಯಾರ್ಥಿಗಳಿಗೆ ಯೋಗ ಮತ್ತು ವೇದಾಂತ ವೈದೀಕ ಶಿಕ್ಷಣ ನೀಡುತ್ತಾ ಭಾರತೀಯ ಸಂಸ್ಕøತಿಯ ಪರಿಮಳ ಬೀರುವ ಕೆಲಸ ಮಾಡುತ್ತಿದ್ದಾರೆ. ಹಾಗೂ ಜೋಗಭಟ್ಟರ ಕೇರಿಯ ಪ.ನಾ.ಶಾಸ್ತ್ರಿಯವರು ಇಲ್ಲಿ ಓದಿ ರಾಷ್ಟ್ರೀಯ ವಿದ್ಯಾಲಯ ಶೃಂಗೇರಿಯಲ್ಲಿ ಶಿಕ್ಷಣ ಮುಗಿಸಿ ಗುರುವಾಯುರಿನ ಸಂಸ್ಕøತ ವಿದ್ಯಾಲಯ ಪ್ರಿನ್ಸಿಪಾಲರಾಗಿ ಸದ್ಯ ವಾರಣಾಸಿಯ ಸಂಸ್ಕøತ ವಿಶ್ವವಿದ್ಯಾಲಯದ ಉಪ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಲೇಷಿಯಾ ದೇಶದ ಸಂಸ್ಕøತ ಸಭೆಯಲ್ಲಿ ಭಾಗವಹಿಸಿ ಜಾಗತಿಕ ವ್ಯಕ್ತಿಯಾಗಿ ಹಲವಾರು ಪುಸ್ತಕ ಬರೆದಿದ್ದಾರೆ. ಈ ವ್ಯಕ್ತಿಗಳ ಸಾಧನೆ ತಾಲೂಕಿನ ಹೆಮ್ಮೆ ಎನಿಸಿದೆ. ಬಿಸಗೋಡಿನ ಶ್ರೀ ವಿರೂಪಾಕ್ಷ ಜಡ್ಡಿಪಾಲರವರು ತಿರುಪತಿಯಲ್ಲಿ ವಿಶ್ವವಿದ್ಯಾಲಯದಲ್ಲಿ ಕೆಲಸದಲ್ಲಿದ್ದು ಅಂತಾರಾಷ್ಟ್ರೀಯ ಮಟ್ಟದ ರಾಮಾಯಣ ವಿಚಾರ ಸಂಕೀರಣಗಳಲ್ಲದೆ ಹಲವಾರು ಕಾರ್ಯಗಳಲ್ಲಿ ತಮ್ಮ ಪ್ರಬಂಧ ಮಂಡಿಸಿದ ಕೀರ್ತಿ ಇವರದ್ದು. ಕಲಾ ಪ್ರಾಕಾರಗಳಲ್ಲಿ ಒಂದಾದ ಕೀರ್ತನೆಯಲ್ಲಿ ಕಿರಿಯ ಕೀರ್ತನಕಾರ ಕೆಳಗಿನಪಾಲು ರಾಮಕೃಷ್ಣ ಭಟ್ಟರು ಸೇವೆ ಸಲ್ಲಿಸಿದರೆ ಸದ್ಯ ಈಶ್ವರದಾಸರು ವೃತ್ತಿಪರ ದಾಸರಾಗಿದ್ದಾರೆ.
 ಭರತನಾಟ್ಯ ತಾಲೂಕಿನಲ್ಲಿ ಪ್ರಚಲಿತವಿರುವ ನೃತ್ಯ ವಿಶೇಷ ಶ್ರೀ ಸುಮಾ ತೊಂಡೆಕೆರೆ, ಸೀಮಾ ಭಾಗವತ, ಅಮೃತಾ ಭಟ್ಟ, ಸಹನಾ ಭಟ್ಟ ಮತ್ತು ಇವರೆಲ್ಲರ ಶಿಷ್ಯವೃಂದದವರು ನಾಟ್ಯಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಪ್ರಚಾರಕ್ಕೆ ಬಂದಿರುವ ಅವಧಾನ ಕಲೆಯನ್ನು ಅನಗತ ಮಾಡಿಕೊಂಡ ಹಲಸ್ಕಂಡ ವೆಂಕಣ್ಣನವರು ಪ್ರಾವೀಣ್ಯತೆ ಪಡೆದಿದ್ದಾರೆ.

ಸಂಗೀತ – ಯಕ್ಷಗಾನ

 ಶೋಬಾನೆ ಹಾಡುಗಳ ಸಾಗರವೆ ಆಗಿರುವ ಯಲ್ಲಾಪುರ ಜಾನಪದ ಸಂಗೀತ ಸಿರಿವಂತಿಕೆಯನ್ನೂ ಹೊಂದಿದೆ. ಶುಭ ಸಮಾರಂಭದ ಮದುವೆ-ಮುಂಜಿಗಳಲ್ಲಿ ಸಂಪ್ರದಾಯದ ಹಾಡು ಹೇಳುವ ಭಗಿನಿಯರು ತಲೆತಲಾಂತರವಾಗಿ ಶಿಷ್ಟಾಚಾರದಂತೆ ಹಾಡುತ್ತ ಮುಂದಿನ ತಲೆಮಾರಿಗೆ ದಾಟಿಸುತ್ತಿದ್ದಾರೆ. ಪರಂಪರಾಗತ ಪದ್ಧತಿಯನ್ನು ಜೀವಂತವಾಗಿಡುವ ವಿದ್ಯೆ ಇದಾಗಿದೆ. ಸದ್ಯ ಶಾಸ್ತ್ರೀಯ ಸಂಗೀತ ಯಲ್ಲಾಪುರದಲ್ಲಿ ಮಾರ್ದನಿಸುತ್ತದೆ. ಡಾ|| ಪಂಡಿತ || ಗಣಪತಿ ಭಟ್ಟ ಹಾಸಣಗಿಯವರು ದೇಶವಿದೇಶಗಳಲ್ಲಿ ಸಂಗೀತ ಕಚೇರಿಗೆ ನಡೆಸಿ ಅಂತಾರಾಷ್ಟ್ರೀಯ ಮನ್ನಣೆ ಪಡೆದು ರಾಜ್ಯ-ರಾಷ್ಟ್ರ ಮಟ್ಟದ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಯಲ್ಲಾಪುರದ ವಾಣಿ ಹೆಗಡೆಯವರು ಶಾಸ್ತ್ರೀಯ ಸಂಗೀತ ಸುಗಮ ಸಂಗೀತ ಭಜನೆಗಳನ್ನು ಹಾಡುವುದರಲ್ಲಿ ಪ್ರಸಿದ್ಧರು. ಸ್ವರ ಮಾಧುರಿ ವಿದ್ಯಾಲಯದ ಮೂಲಕ ಶಿಷ್ಯಕೋಟಿ ಸೃಷ್ಟಿಸಿದ್ದಾರೆ. ಇವರ ಶಿಷ್ಯ ತಂಡ ಶ್ರೀ ದತ್ತಣ್ಣ ಚಿಟ್ಟೆಪಾಲ ಅಂತೆಯೇ ಪ್ರಸನ್ನ ವೈದ್ಯ, ಗಣಪತಿ ಹೆಗಡೆ, ಶ್ರೀಮತಿ ರೇಖಾ ಭಟ್ಟ ಕೋಟೆಮನೆ, ಕುಮಾರಿ ಶೃತಿ ಜೋಡೆ ಆಕಾಶವಾಣಿ ಕಲಾವಿದ ಶ್ರೀಪಾದ ಹೆಗಡೆ ಕಂಪ್ಲಿ, ಶಿವರಾಮ ಭಾಗವತ ಬರಬಳ್ಳಿ, ಶಿವರಾಮ ಭಾಗವತ ಕನಕನಹಳ್ಳಿ ಪ್ರಖ್ಯಾತರಾದರೆ ಕೊಳಲು ವಾದನದಲ್ಲಿ ಗೋಕುಲ ಬಾನ್ಸೂರಿ ಟ್ರಸ್ಟಿನ ಶಿರನಾಲಾ ನಾಗರಾಜ ಹೆಗಡೆ ತಂಡದವರಲ್ಲದೆ ಉದಯೋನ್ಮುಖರು ಇದ್ದಾರೆ. ಶ್ರೀಮತಿ ಲಕ್ಷ್ಮೀ ಭಟ್ಟ ಚಿಮನಳ್ಳಿ, ಗಮಕದಲ್ಲಿ ಶ್ರೀ ಮುಕ್ತಾ ಶಂಕರ ರವರು ಹೆಸರುವಾಸಿಗಳಾಗಿದ್ದಾರೆ.



ಯಕ್ಷಗಾನ

 ಕರ್ನಾಟಕದ ಹೆಮ್ಮೆಯ ಕಲೆ ಯಕ್ಷಗಾನ ಸಪ್ತಸಾಗರದಾಚೆ ಯೂರೋಪ ಮತ್ತು ಅಮೇರಿಕಾ ಖಂಡಗಳಲ್ಲಿ ಅರಬ್ ರಾಷ್ಟ್ರಗಳಲ್ಲಿ ನಿನವಿಸಿದ ಚಂಡೆ-ಮದ್ದಳೆಗಳ ಸದ್ದಿನಲ್ಲಿ ಯಲ್ಲಾಪುರದ ಪಾಲು ದೊಡ್ಡದಿದೆ. ಸುಮಾರು 2 ಶತಮಾನಗಳ ಹಿಂದಿನಿಂದಲೇ ಯಲ್ಲಾಪುರ ಯಕ್ಷಗಾನದ ತವರೂರು ಆಗಿದೆ. ಯಕ್ಷಗಾನ ಪ್ರಸಂಗಕರ್ತರು, ಯಕ್ಷ ಬರಹಗಾರರು ಇಲ್ಲಿದ್ದಾರೆ. ಪ್ರಾಚೀನ ಕಾಲದ ರಾಜಸೂಯ ಪ್ರಸಂಗ ರಚಿಸಿದ ಕಳಚೆಯ ವೆಂಕಟ್ರಮಣ ಹೆಗಡೆ, ದಿ. ಹಂಡ್ರಮನೆ ಸುಬ್ರಾಯ ಭಟ್ಟರು, ವೀರವಾನರ ಯಕ್ಷಗಾನ ಪ್ರಸಂಗ ರಚಿಸಿರುತ್ತಾರೆ. ಕಳಚೆಯ ಬೆನವೆಯವರು ಪದ್ಮಾಕ್ಷಿ ಪರಿಣಯ ರಚಿಸಿದ್ದಾರೆ. ಅನಂತ ವೈದ್ಯರವರು ಯಕ್ಷಗಾನ ಮಾಸಪತ್ರಿಕೆ ನಡೆಸಿದ್ದಲ್ಲದೆ ಶ್ರೀಕೃಷ್ಣ ಸಂಧಾನ ಕೃತಿ ಸಂಗ್ರಹಿಸಿ ಪ್ರಕಟಿಸಿದ್ದಾರೆ. ಯಲ್ಲಾಪುರ ತಾಲೂಕನ್ನೆ ಕಾರ್ಯಕ್ಷೇತ್ರವಾಗಿರಿಸಿಕೊಂಡ ಯಕ್ಷಋಷಿ ಶ್ರೀ ಗಜಾನನ ಭಟ್ಟ ಹೊಸ್ತೋಟರವರು ಸಂಪ್ರದಾಯದ ಜೊತೆ ಆಧುನಿಕ ಯಕ್ಷಗಾನ ರಚಿಸಿದ್ದಾರೆ. ಶ್ರೀ ಸೀತಾರಾಮ ಹೆಗಡೆ, ಶ್ರೀ ಆರ್.ಎಸ್.ಹೆಗಡೆ ಪ್ರಸಂಗ ಬರೆದಿದ್ದಾರೆ. ಯಕ್ಷಗಾನದ ಆಕಾಶವಾಣಿ ಕಲಾವಿದರಾಗಿ ಹಲವು ಸೇವೆ ಮಾಡಿದರೂ ಕೆಲವರಲ್ಲಿ ದೊಡ್ಡ ಹೆಸರು ಶ್ರೀ ದಿ|| ಬಾಲಗದ್ದೆ ದೊಡ್ಡ ತಿಮ್ಮಣ್ಣ ಭಟ್ಟರು, ಶ್ರೀ ಶಿಗೇಮನೆ ನಾರಾಯಣ ಹೆಗಡೆಯವರು ಮತ್ತು ತಂಡದವರಿದ್ದಾರೆ. ಹಾಲಿ ಬಾಲಿಗದ್ದೆ ತಿಮ್ಮಣ್ಣ ಭಟ್ಟರು, ಬಾಲಿಗದ್ದೆ ಶಂಕರ ಭಟ್ಟರು ಪ್ರಸಿದ್ಧರು.

 ಸುದೀರ್ಘ ಪ್ರಲಾಪವೇ ಆದರೂ ಯಕ್ಷಗಾನದ ಅಂತರಂಗದ ಬಗ್ಗೆ ಎರಡು ಮಾತು ಬರೆಯಲೇಬೇಕಾಗಿದೆ. ಯಲ್ಲಾಪುರದ ಯಕ್ಷಗಾನಕ್ಕೆ ಅದರದ್ದೇ ಆದ ಪರಂಪರೆ ಇದೆ. ಪ್ರಾಚೀನ ಕಾಲದ ಸುಮಾರು 50 ವರ್ಷಗಳ ಹಿಂದೆ ಆಯಾ ಊರಿನ ಭಾಗವತರು ಗ್ರಾಮ ದೇವಸ್ಥಾನಗಳಲ್ಲಿ ಪ್ರಥಮ ಗಣಪತಿ ಪದ್ಯ ಹಾಡುವಾಗ ತಾಸಮಾರಿ ಎನ್ನುವ ನಾಡವಾದ್ಯ ಉಪಯೋಗಿಸುತ್ತಿದ್ದರು. ತಬಲಾದ ಡಗ್ಗಾದಂತಹ ಹರವಾದ ವಾದ್ಯ ಚಂಡೆಗೆ ಪೂರಕವಾಗಿ ಇರುತ್ತಿತ್ತು. ಭಾಗವತರು ನಿಂತುಕೊಂಡೇ ಪದ ಹೇಳುವ ಪದ್ಧತಿ ಇತ್ತು. ತಲೆತಲಾಂತರಗಳಿಂದ ಭಾಗವತಿಕೆ ಮಾಡಿದ ಮನೆತನಗಳಿವೆ. ಇಂತಹ ನಾಲ್ಕು ತಲೆಮಾರಿನ ಭಾಗವತರನ್ನು ಗುರುತಿಸಬಹುದು. ಅವರಲ್ಲಿ ಸ್ವರ್ಣವಲ್ಲೀ ಮಠದ ಆಸ್ಥಾನ ಭಾಗವತರಾದ ಶ್ರೀ ಗುಡ್ನಮನೆ ಭಾಗವತರ ಕುಟುಂಬ ವಾರ್ಷಿಕ ದೀಪಾವಳಿ ವೇಳೆಗೆ ಸೀಮೆಗೆಲ್ಲ ಹೋಗಿ ಪದ್ಯ ಹೇಳಿ ತೆಂಗಿನಕಾಯಿ ಗೌರವ ಪಡೆಯುವ ಪದ್ಧತಿ ಇತ್ತು. ಇತ್ತಿತ್ತಲಾಗಿ ಈ ಪದ್ಧತಿ ನಿಂತು ಹೋಗಿದೆ. ಅವರ ಮನೆತನದ ಶ್ರೀ ಕೋಮಾಳೆ ರಾಮಚಂದ್ರ ಭಾಗವತರು, ಶ್ರೀ ಗಣಪತಿ ಭಾಗವತರು ಇವರು ಪ್ರಸಿದ್ಧ ಮೃದಂಗ ವಾದಕರು, ಪ್ರಸಂಗಕರ್ತರೂ ಹೌದು. ಹಾಗೆಯೇ ಮಿಗ್ರಿಗದ್ದೆ ವಾಸುದೇವ ಭಾಗವತರಿಂದ ಮುಂದೆ ನಾರಾಯಣ ಭಾಗವತರು ಇವರು ದಿವಂಗತರು. ಅವರ ಮಗ ರಾಮಚಂದ್ರ ಬಾಗವತರು ಮಗ ಶಿವರಾಮ ಭಾಗವತರು ಇವರೂ ಶಾಸ್ತ್ರೀಯ ಸಂಗೀತದ ಅಧ್ಯಯನ ಮಾಡಿದವರೂ ಹೌದು. ಬರಬಳ್ಳಿ ಜನಪದ ಮನೆ ಭಾಗವತ ಕುಟುಂಬ, ತೆಲಂಗಾರಿನ ತಾರಿಕುಂಟೆ ಭಾಗವತರು, ಬಾಳೆಹದ್ದದ ಶ್ರೀ ಕೃಷ್ಣ ಭಾಗವತರು, ಮಗ ತಿಮ್ಮಣ್ಣ ಭಾಗವತರು, ಮಂಚಿಕೇರಿಯ ಮಳಗಿಮನೆಯ ಗಜಾನನ ಹೆಗಡೆ ಭಾಗವತರಾದರೆ ಕುಟುಂಬ ಸದಸ್ಯರು ರಾಮಕೃಷ್ಣ ಹೆಗಡೆ ಮಕ್ಕಳು ಎಲ್ಲಾ ಕಲಾವಿದರ ಕುಟುಂಬವಾಗಿದೆ. ಮಳಗಿಮನೆಯ ಅಳಿಯ ಪದ್ಮನಾಭ ಭಟ್ಟರು ಮತ್ತು ಅವರ ಮಗ ಪ್ರಸನ್ನ ಭಟ್ಟರು ಯಕ್ಷ ಭಾಗವತರು, ಕಲಾವಿದರು, ಅರ್ಥಧಾರಿಗಳೂ ಹೌದು. ಹೊನ್ನಗದ್ದೆಯ ಧುಂಡಿಗದ್ದೆ ಮನೆತನದವರು,ತಲೆಮಾರಿನ ಕಲಾವಿದರು ಇಂದಿಗೂ ಕಲಾಸೇವೆ ಇದೆ. ಬರಬಳ್ಳಿ ವಡ್ಡಿಯ ಗಣಪತಿ ಭಟ್ಟ, ಬೆಳ್ಳಿ ಶಂಕರಭಟ್ಟ, ಬೆಳ್ಳಿ ಸಹೋದರರು, ಮಗ ಶೀಪಾದ ಬೆಳ್ಳಿ ಅನಿಭವಿಕ ಕಲಾವಿದರು. ಬಾಳಗಿನ ಕಟ್ಟದ ಚಂದ್ರಶೇಕರ ಮನೆಯ ಮಹಾಬಲೇಶ್ವರ ಮತ್ತು ಸಹೋದರ, ಬೀಗಾರಿನ ಶಿವರಾಮ ಹೆಗಡೆ, ಮೊಮ್ಮಗ ಶಿವರಾಮ ಹೆಗಡೆ, ಭಾಸ್ಕರ ಗಾವ್ಕರ್ ಬಿದ್ರೆ, ಮನೆ ಸಹೋದರರು, ಶ್ರೀ ಚಂದ್ರಶೇಕರ ಬಿದ್ರೆ ಮನೆಯವರು, ಮೇಳದ ವೃತ್ತಿ ಕಲಾವಿದರೂ ಹೌದು. ಮೊಟ್ಟೆಗದ್ದೆಯ ಗಣಪತಿ ಭಾಗ್ವತರು, ತಂದೆ ವೆಂಕಟರಮಣ ಭಟ್ಟ, ಮಾತುಗಾರಿಕೆಯಿಂದ ಪ್ರಭಾವಿತರು. ಮೇಳಗಳಲ್ಲಿ ಭಾಗವತರಾಗಿ ಕೆಲಸ ಮಾಡುತ್ತಿದ್ದಾರೆ. ಹಳೆಯ ತಲೆಮಾರಿನ ದಿ|| ಮಂಗಳಾರ್ತಿ ನರಸಿಂಹ ಭಟ್ಟರು, ದಿ|| ಇಡಗುಂದಿ ಗಜಾನನ ಭಟ್ಟರು, ಶಂಕರ ಭಟ್ಟರು, ಅಣಲಗಾರ ಮೇಳದ ಶಿಂಬಳಹಾರ ಸಣ್ಣಣ್ಣ ಭಾಗ್ವತರು, ಮಧುರ ಕಂಠಶ್ರೀಯ ಇವರು ಉತ್ತಮ ಭಾಗವಂತಿಕೆ ಜೊತೆಗೆ ಒಳ್ಳೆಯ ಪಾತ್ರಧಾರಿಗಳು, ಅಕ್ರೂರ, ಗೌರವ ಮೊದಲಾದ ಪಾತ್ರಗಳು ಜನಪ್ರಿಯ, ದಿ|| ಸೀಗೆಮನೆ ಎನ್. ಎಸ್. ಹೆಗಡೆ ತವರು ಪ್ರಶಿದ್ಧ ಅರ್ಥಕಾರಿಗಳು. ಭಾಗವತಿಕೆಯಲ್ಲಿ ಇತ್ತಿತ್ತಲಾಗಿ ಬಹುಪ್ರಸಿದ್ಧಿಗೆ ಬಂದು ರಾಷ್ಟ್ರೀಯ ಬಿಸ್ಮಿಲ್ಲಾಖಾನ ಪ್ರಶಸ್ತಿಗೆ ಭಾಜನರಾದ ದಂತಳಿಗೆ ಅನಂತ ಭಾಗ್ವತರು ದೂರದ ಅಮೇರಿಕಾದಲ್ಲಿ ಯಕ್ಷಡಿಂಡಿಮ ನುಡಿಸಿ ಯಕ್ಷಗಾನದ ವಿಶ್ವವಿಖ್ಯಾತಿಗೆ ಕಾರಣರಾದರೆ ಹೀಗೇ ಭಾಗವತಿಕೆಯಲ್ಲಿ ಇನ್ನೂ ಪ್ರಸಿದ್ಧರಾಗಿದ್ದಾರೆ. ಮೃದಂಗದೊಡನೆ ಮಾತನಾಡುವ ಮದ್ದಳೆಯ ಮಾಂತ್ರಿಕ ಶ್ರೀ ಶಂಕರ ಭಾಗವತ ಶಿಷ್ಟಮುಡಿಯವರು ಅಭಿಜಾತ ಕಲಾವಿದರು. ಇವರ ಸೇವೆ ಅನನ್ಯ. ಶ್ರೀ ಹಂಡ್ರಮನೆ ನರಸಿಂಹ ಭಟ್ಟರು ಅಷ್ಟೇ ಪ್ರಖ್ಯಾತರು. ಚಂಡೆಯಲ್ಲಿ ಶ್ರೀ ಮಹಾಬಲೇಶ್ವರ ನಾಯ್ಕನಕೆರೆ ನಾಗಪ್ಪ ಕೋಮಾರ ಮುಂತಾದವರಿದ್ದಾರೆ. ತಾಳಮದ್ದಳೆಯ ಅರ್ಥಧಾರಿಗಳಾಗಿ ದಿ|| ಹಾಸಣಗಿ ಗಣಪತಿ ಭಟ್ಟರು, ಬಾಲಿಗದ್ದೆ ಸಣ್ಣ ತಿಮ್ಮಣ್ಣ ಭಟ್ಟರು, ದೊಡ್ಡ ತಿಮ್ಮಣ್ಣ ಭಟ್ಟರು, ದಿ|| ಬೆಳಖಂಡ ದೇವ ಭಟ್ಟರು, ದಿ|| ತಾರಿಮಕ್ಕಿ ರಾಮಚಂದ್ರ ಭಟ್ಟರು, ಹಳೆಯ ತಲೆಮಾರಿನವರಾದರೆ ಮುಂದೆ ಬಂದ ಭರವಸೆ ಹುಟ್ಟಿಸುವ ಅನೇಕ ಪ್ರತಿಭೆಗಳಿವೆ. ಅದರಲ್ಲಿ ಶ್ರೀ ಸಿ. ಜಿ. ಹೆಗಡೆ ಯಲ್ಲಾಪುರದವರು ಅಮೇರಿಕಾದಲ್ಲಿಯೂ ಪಾತ್ರ ಮಾಡಿ [ಚಿಟ್ಟಾಣಿಯವರ ಸಂಗಡ] ಪ್ರಸಿದ್ಧ ಅರ್ಥಧಾರಿಗಳಾಗಿ ಸಂಘಟಕರಾಗಿ ಹೆಸರು ಮಾಡಿದರೆ ಇವರ ಮಗಳು ಶ್ರೀಮತಿ ವಸುಧಾ ಹೆಗಡೆ ಯಕ್ಷಗಾನದ ಚಿಟ್ಟಾಣಿ ಮನೆತನದ ಬಗ್ಗೆ ಪಿ.ಎಚ್.ಡಿ. ಗ್ರಂಥ ಬರೆದಿದ್ದು ಯಕ್ಷ ಪ್ರಪಂಚಕ್ಕೆ ಉನ್ನತ ಕೊಡುಗೆ ನೀಡಿದ್ದಾರೆ. ಹಿರಿಯ ಅರ್ಥಧಾರಿಗಳು, ಸಾಹಿತಿಗಳು, ಯಕ್ಷಗಾನ ಪತ್ರಿಕಾಕರ್ತರು ಆದ ಅನಂತ ವೈದ್ಯರು, ಶ್ರೀ ಎಂ.ಎನ್.ಹೆಗಡೆ, ಜಿ.ಎಸ್.ಹೆಗಡೆ ಮಳಲಗಾಂವ್, ಮಾಗೋಡ ಗಣಪತಿ ಭಟ್ಟರು, ಮಾಗೋಡ ರಾಮಕೃಷ್ಣ ಭಟ್ಟರು ಸೇವೆ ಸಲ್ಲಿಸುತ್ತಿದ್ದರೆ ಭರವಸೆಯ ಯುವ ಪ್ರತಿಭೆಗಳು ಶ್ರೀ ನಾರಾಯಣ ದೇಸಾಯಿ ದೇಸಾಯಿಮನೆ, ಶ್ರೀ ಗಣಪತಿ ಭಟ್ಟ ಸಂಕದಗುಂಡಿ, ಶ್ರೀ ಮಹೇಶ ಭಟ್ಟ ಇಡಗುಂದಿ, ಮ.ರಾ.ಭಟ್ಟ ಗುಡ್ಡೆ, ಲಕ್ಷ್ಮೀ ನಾರಾಯಣ ಗುಮ್ಮಾನಿ, ಸದಾಶಿವ ಮಲವಳ್ಳಿ ಹೀಗೆ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ವ್ಯಾಪ್ತಿಯನ್ನು ದಾಟುತ್ತಿರುವ ಪ್ರಸಿದ್ಧಹಸ್ತರಾಗಿದ್ದಾರೆ. ಪ್ರಸಿದ್ಧ ವಾಗ್ಮಿಗಳಾಗಿದ್ದಾರೆ. ಅಲ್ಲದೆ ಅಲ್ಲಲ್ಲಿಯ ಮಹಿಳಾ ಯಕ್ಷಗಾನ ಕೂಟಗಳು ಕಾರ್ಯ ಪ್ರವೃತ್ತವಾಗಿವೆ. ಕಳಚೆ, ಈರಾಪುರ, ತೇಲಂಗಾರ, ಬೀಗಾರ, ನಂದೊಳ್ಳಿ, ಮಂಚಿಕೇರಿಯ ಮಹಿಳಾ ಯಕ್ಷಗಾನ ತಾಳಮದ್ದಳೆ ಕೂಟಗಳಿವೆ. ಶ್ರೀ ಅನಂತ ಕುಣಬಿ, ನಾಗಪ್ಪ ಗೌಡ ಮುಂತಾದವರು ಪ್ರಸಿದ್ಧರು. ಯಕ್ಷಗಾನ ಕಲೆಯನ್ನು ಬೆಳೆಸುವ ಹಲವಾರು ಸಂಸ್ಥೆಗಳು ಯಲ್ಲಾಪುರದಲ್ಲಿ ಕೆಲಸ ಮಾಡುತ್ತಿವೆ. ಶ್ರೀ ಜಿ. ಟಿ. ಭಟ್ಟ ಬೊಮ್ಮನಳ್ಳಿಯವರು ಪ್ರಸಿದ್ಧ ಅರ್ಥಧಾರಿಗಳಾಗಿಯೂ ಶ್ರೀ ರಾಯಸಂ ಯಕ್ಷ ಕಲಾಕೇಂದ್ರ ನಡೆಸುತ್ತಿದ್ದಾರೆ. ಪ್ರಮುಖವಾಗಿ ಯಲ್ಲಾಪುರ ಸಂಕಲ್ಪ ಸೇವಾ ಸಂಸ್ಥೆ ಇದರ ಲಾಂಛನವೇ ಯಕ್ಷಮುಖ ವರ್ಣಿಕೆ. ಇದರ ರೂವಾರಿಗಳಾದ ಪ್ರಮೋದ ಹೆಗಡೆಯವರು ಸ್ವತ: ಯಕ್ಷಗಾನ ಪಾತ್ರಧಾರಿಗಳು ಅನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಪ್ರತಿವರ್ಷ ಸಂಸ್ಕøತಿ, ಸುಗ್ಗಿ ಹೆಸರಿನ ಸಾಂಸ್ಕøತಿಕ ಕಾರ್ಯಕ್ರಮದ ಸಂಕಲ್ಪ ಉತ್ಸವದಲ್ಲಿ ಯಕ್ಷಗಾನಕ್ಕೆ ಪ್ರಮುಖ ಸ್ಥಾನವಿದೆ. ಮೈತ್ರಿ ಹೆಸರಿನ ತೇಲಂಗಾರದ ಸಾಂಸ್ಕøತಿಕ ಸಂಘ ಯಕ್ಷಗಾನದ ಪ್ರತಿಬಿಂಬವೇ ಆಗಿದೆ. ಯಲ್ಲಾಪುರ ಮುಳುಗಡೆ ಕ್ಷೇತ್ರದವರಾಗಿ ಸದ್ಯ ಶಿರಸಿಯಲ್ಲಿ ನ್ಯಾಯವಾದಿಗಳಾಗಿರುವ ಬರಬಳ್ಳಿ ವಿ. ಎನ್. ಭಾಗವತರು ತಮ್ಮ ಅಭಿಮಾನ ವೇದಿಕೆಯ ಮುಖಾಂತರ ಯಕ್ಷಗಾನ ಪ್ರದರ್ಶನ, ತರಬೇತಿ ಶಿಬಿರ ನಡೆಸುತ್ತಿದ್ದಾರೆ. ಯಕ್ಷಗಾನದ ಸ್ತ್ರೀ ಪಾತ್ರ ಸರ್ವಭೌಮ - ಶ್ರೀ ಸದಾಶಿವ ಮಲವಳ್ಳಿರವರು ಯಕ್ಷಗಾನ ಕಲಿಸುತ್ತಿದ್ದಾರೆ. ಹಲವು ಮಹಿಳಾ ಸಂಘಟನೆಗಳು ಪ್ರಚಲಿತವಾಗಿವೆ. ಶ್ರೀ ಶಂಕರ ಭಾಗವತರ ನಾದ ಶಂಕರ ಸಂಸ್ಥೆಯು ಕೆಲಸ ಮಾಡುತ್ತಿದೆ.



ಕವಿಗಳು - ಸಾಹಿತಿಗಳು

      ಕುರಿತೋದದೆಯುಂ ಕಾವ್ಯ ಪ್ರಯೋಗ ಪರಿಣಿತರಾದರೂ, ಪ್ರಾಚೀನ ಕಾವ್ಯ ಸಾಹಿತ್ಯದ ಬೆಳಕು ಚೆಲ್ಲುವುದು ಸಾಹಸದ ಕೆಲಸವೇ ಸರಿ. ಸದ್ಯದ ಮಾಹಿತಿಯಂತೆ ಯಲ್ಲಾಪುರದ ಸಾಹಿತ್ಯ ಸೃಷ್ಟಿ ಸುಮಾರು 600 ವರ್ಷಗಳ ಹಿಂದೆ ಹೋಗುತ್ತದೆ. ಶ್ರೀ ಗಂಗಾಧರೇಂದ್ರ ಸ್ವಾಮಿಗಳು ಎನ್ನುವವರು ಬರೆದರೆನ್ನಲಾದ ಗ್ರಂಥ. ಸ್ವರಾಜ್ಯ ಸಿದ್ಧಿ ಸಂಸ್ಕøತ ಗ್ರಂಥವಾಗಿದ್ದು ಸದ್ಯ ಅದನ್ನು ಕುಂಭತ್ತಿಯ ಮಹಾಬಲೇಶ್ವರ ಭಟ್ಟರು ಕನ್ನಡ ಅನುವಾದಿಸಿ ಸ್ವರ್ಣವಲ್ಲೀ ಸರ್ವಜ್ಞೇಂದ್ರ ಪ್ರತಿಷ್ಠಾನ ಪ್ರಕಟಿಸಿದೆ. ಹಿರಿಯ ಕವಿಗಳು ರಚಿಸಿದ ಸಂಸ್ಕøತ ಸಾಹಿತ್ಯ ದೊರಕುತ್ತದೆ. ದಿ. ಗಣಪತಿ ಕೃಷ್ಣ ಭಟ್ಟ ಎನ್ನುವವರು ಸ್ವಂತ ಖರ್ಚಿನಿಂದ ಕಾರವಾರದ ಮಹಾಲೆ ಮುದ್ರಣಾಲಯದಲ್ಲಿ ಮುದ್ರಿಸಿದ ಶಂಕರ ಸಂಹಿತೆ ಸುಮಾರು 1943ರ ಸುಮಾರಿಗೆ ಪ್ರಕಟವಾದರೆ, ಬರಬಳ್ಳಿ ಮತ್ತು ಹಂದಿಗೋಣದಲ್ಲಿ ವಾಸವಾಗಿದ್ದ ದಿ.ರಾಮೇಶ್ವರ ಸ್ವಾಮಿಗಳು ಅದೇ ಸುಮಾರಿ ನಾನು ಯಾರು?” ಎನ್ನುವ ಅಧ್ಯಾತ್ಮಿಕ ಗ್ರಂಥ ಬರೆದರು. ನಂತರ ನಮಗೆ ಸಿಗುವುದು- ನಾಯ್ಕನಕೆರೆಯಲ್ಲಿ ವಾಸವಿದ್ದ ಶ್ರೀ ಯೋಗಿಶ್ವರ ಸ್ವಾಮಿಗಳು ರಚಿಸಿದ ಆಧ್ಯಾತ್ಮಿಕ ಗ್ರಂಥ. ಮುಂದೆ ಈ ಸ್ವಾಮಿಗಳು ದಾಂಡೇಲಿಗೆ ಹೋದರು. ನಂತರ ಬಂದ ಶಿವಾನಂದರು ಆಧ್ಯಾತ್ಮ ರಾಮಾಯಣವನ್ನು ವಾರ್ಧಿಕ ಷಟ್ಪದಿಯಲ್ಲಿ ಬರೆದರು. ಸರಿಸುಮಾರು ಆ ಸಂದರ್ಭಗಳಲ್ಲಿ ದಿ.ಹಿತ್ಲಳ್ಳಿ ಗೋವಿಂದಭಟ್ಟರು- ಸ್ವರ್ಣವಲ್ಲಿ ಚರಿತ್ರೆ ಸಂಸ್ಕøತದಲ್ಲಿ ಬರೆದರು. ಯೋಗೀಶ್ವರ ಮಹಾತ್ಮೆಯನ್ನು ಅವರು ಬರೆದರು. ಅದರಂತೆ ಸಂಸ್ಕøತದಲ್ಲಿ ಗ್ರಂಥ ರಚಿಸಿದ ಬಾಲಿಗದ್ದೆ ತಿಮ್ಮಣ್ಣ ಭಟ್ಟರು. ಸಂಸ್ಕøತ ಕನ್ನಡಗಳೆರಡರಲ್ಲೂ ಗ್ರಂಥ ರಚಿಸಿದ ಬಾಲಿಗದ್ದೆ ಶಂಕರ ಭಟ್ಟರು ಹಿತ್ಲಳ್ಳಿ ನಾಗೇಂದ್ರ ಭಟ್ಟರು. ದಿವಂಗತ ಸೂರ್ಯನಾರಾಯಣ ಭಟ್ಟರೂ ಪ್ರಮುಖರಾದರೆ ಶ್ರೀ ಭರಣಿ ನಾಗೇಂದ್ರ ಭಟ್ಟರೂ ಶ್ರೀ ಕೋಟೆಮನೆ ರಾಮಚಂದ್ರ ಭಟ್ಟರೂ, ಶ್ರೀ ಪಿ.ಎನ್.ಶಾಸ್ತ್ರೀಗಳೂ ಪ್ರಮುಖರೆ. ಆದರೂ ಯಲ್ಲಾಪುರ ತಾಲೂಕಿನ ಕಾವ್ಯ ಚರಿತ್ರೆಯ ನಿಶ್ಚಿತ ಇತಿಹಾಸ ರೂಪುಗೊಂಡದ್ದು 1964-65ನೇ ಇಸವಿಯಲ್ಲಿ ದಾಖಲೆ ಸಹಿತ ಸಿಗುತ್ತದೆ. ಈ ಸಂದರ್ಭದಲ್ಲಿ ಭರತನಹಳ್ಳಿಯ ಮಿತ್ರರ ಗುಂಪು ಆದಾಗಲೇ ಸಾಹಿತ್ಯ ಕೃಷಿಯಲ್ಲಿ ಪರಿಣಿತವಾಗಿತ್ತು. ಮಿತ್ರ ಪ್ರಕಾಶನ ಎನ್ನುವ ಹೆಸರಿನ ಪ್ರಕಾಶನ ಸಂಸ್ಥೆ ಸ್ಥಾಪಿಸಿದರು. ಅದರಲ್ಲಿ ಶ್ರೀ ಎನ್.ಎಸ್. ಹೆಗಡೆ ಕುಂದರಗಿ, ಶ್ರೀ ನಾ.ಸು.ಭರತನಹಳ್ಳಿ, ಶ್ರೀ ಎನ್.ಎಸ್.ಹೆಗಡೆ ಶೀಗೆಮನೆ ಮೊದಲಾದವರು ಪ್ರಮುಖರು. ವಿಜಯ ಎನ್ನುವ ಸ್ಮರಣ ಸಂಚಿಕೆಯಿಂದ ಪ್ರಾರಂಭವಾದ ವಿಜಯ ಪ್ರಕಾಶನ, ಶ್ರೀ ಕುಸುಮಾಶ್ರೀತ ನಾಮದ, ಮುಳುಕನಜಡ್ಡಿ ಶಿವರಾಮ ಹೆಗಡೆಯವರ ಕವನ ಸಂಕಲನ ಭಾವ-ತರಂಗ, ತರಂಗ ದರ್ಶನ, ಎನ್ನುವ 2 ಕವಿತಾ ಸಂಕಲನಗಳನ್ನು ಪಿ.ವಿ.ಶಾಸ್ತ್ರೀಯವರ ಕಾದಂಬರಿ ಮತ್ತು ಕುಮಾರ ಸಂಭವಎನ್ನುವ ಕಥಾ ಸಂಕಲನವನ್ನು ಪ್ರಕಟಿಸಿದವು. ಇದು ತಾಲೂಕಿನಲ್ಲಿ ಮೊದಲ ಪ್ರಕಾಶನ ಪ್ರಯತ್ನದ ಕವಿತಾ ಸಂಕಲನ ಎನ್ನಬಹುದು. ಅದೇ ವೇಳೆಗೆ ಕಳಚೆಯ ಬೆಳ್ಳಿ ನರಸಿಂಹ ಭಟ್ಟ ಎನ್ನುವವರು ಬೆನವೆಕಾವ್ಯನಾಮದಿಂದ ಪ್ರಸಿದ್ಧರಾಗಿ ಮುಂದಿನ ದಿನಗಳಲ್ಲಿ ಕೆಲವು ಕವಿತಾ ಸಂಕಲನ ಪ್ರಕಟಿಸಿದರು. ಶ್ರೀ ಎನ್.ಎಸ್.ಹೆಗಡೆ ಕುಂದರಗಿಯವರು ಸಣ್ಣಕತೆಗಾರರು ಅವರ ನೆನಪು ಕಹಿಯಲ್ಲಎನ್ನುವವರ ಕತೆ ನಾಡಿನ ಪ್ರಸಿದ್ಧ ಪತ್ರಿಕೆಯಲ್ಲಿ ಪ್ರಕಟವಾಗಿದೆ. ಮುಂದೆ ಬಂದವರಲ್ಲಿ ಪ.ಗ.ಭಟ್ಟ ಎನ್ನುವವರು 64ರಿಂದಲೂ ಬಿಡಿಕನವನ ಲೇಖನ ಬರೆಯುತ್ತಿದ್ದಾರೆ. 2 ಕಥೆಗಳನ್ನೂ ಬರೆದಿದ್ದರೆ ಪುಸ್ತಕ ಪ್ರಕಟಿಸಿಲ್ಲ. ಪ್ರಸಿದ್ಧ ಕವಿಯಾದ ವನರಾಗ ಶರ್ಮಾ ಸುಮಾರು 20 ಪುಸ್ತಕ ಪ್ರಕಟಿಸಿದ್ದು ಇದರಲ್ಲಿ ಕಥೆ-ಕವಿತೆ-ಕಾದಂಬರಿ ಪ್ರಬಂಧ ಲೇಖನಗಳು ಸೇರಿವೆ. ಶ್ರೀ ನಾ. ಸು. ಭರತನಹಳ್ಳಿಯವರು ಸಾಹಿತ್ಯದ ಮೇರು ಪರ್ವತ ಏರಿದವರು. ಹಲವಾರು ಪ್ರಶಸ್ತಿ ಬಾಚಿಕೊಂಡ ಇವರಿಗೆ ಕರ್ನಾಟಕಶ್ರೀ ಪ್ರಶಸ್ತಿ ಪ್ರಮುಖವಾದದ್ದು. ಪ್ರಸಿದ್ಧ ಪತ್ರಿಕಾ ಸಂಪಾದಕರಾಗಿ ಅಂಕಣಕಾರರಾಗಿ, ಆಧ್ಯಾತ್ಮಿಕ ಲೇಖಕರಾಗಿ ನಾಟಕಕಾರರಾಗಿ, ಕಾದಂಬರಿ, ಆತ್ಮಚರಿತ್ರೆ, ಕವಿತೆ, ಪ್ರವಾಸಕಥನ ಅನುವಾದ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ನುರಿತಿರುವ ಇವರ ಕಾದಂಬರಿ ಭೂಮಿಕೆ, ಮುಳುಗಡೆಯಂಥ ಜ್ವಲಂತ ಸಮಸ್ಯೆ ಪ್ರತಿಬಿಂಬಿಸಿದರೆ ಪರಿವೃತ್ತ ಕಾಳಿದಾಸನ ಜೀವನ ಆಧರಿಸಿದ ಕತೆಯಾಗಿದೆ. ಈ 75ರ ಇಳಿವಯಸ್ಸಿನಲ್ಲೂ ಪತ್ರಿಕಾ ಸಂಪಾದನೆಯೊಡನೆ ವಿಜಯವಾಣಿ ದಿನಪತ್ರಿಕೆಗೆ ಅಂಕಣ ಬರೆಯುತ್ತಿದ್ದಾರೆ. ಶ್ರೀ ರಾಮಚಂದ್ರ ಕೋಟೆಮನೆಯವರ ಸುಳಿಯ ಸೀಮೆಯ ಸನಿಹದಿಂದ ಕವಿತಾ ಸಂಕಲನ ಪ್ರಕಟವಾಗಿದೆ. ದಿವಂಗತ ಗೆಳೆಯರಾದ ಜಿ.ವಿ.ಗಾಂವ್ಕರರವರು ನಾಟಕದೊಡನೆ ಕತೆಗಾರೂ, ಕವಿಗಳೂ ಆಗಿ ಇವರ ಕವಿತೆಗಳು ಆಕಾಶವಾಣಿಯಲ್ಲಿ ಪ್ರಸಾರವಾಗಿವೆ. ಶ್ರೀ ಗ.ನಾ.ಕೋಮಾರ ಬೀಗಾರ, ಶ್ರೀ ಟಿ.ವಿ.ಕೋಮಾರ ಬಾಗಿನಕಟ್ಟಾ ನಾಟಕಕಾರರಾಗಿ ಕವಿಯಾಗಿ-ಕತೆಗಾರರಾಗಿಯೂ ಪ್ರಸಿದ್ಧರು. ಶ್ರೀ ಬೀರಣ್ಣನಾಯಕ ಮೊಗಟಾರವರು ಪ್ರಸಿದ್ಧ ಇಂಗ್ಲೀಷ ಅಂಕಣಕಾರರಾಗಿಯೂ ಕನ್ನಡದ ಕವಿ-ಲೇಖಕರಾಗಿ ಆಕಾಶವಾಣಿ ಚಿಂತನದಲ್ಲಿ ಮಿಂಚಿ ಹೆಸರಿಸಿದ್ದಾರೆ. ಕಾವ್ಯ ಪ್ರಪಂಚದ ಪ್ರಬುದ್ಧರನ್ನು ಗುರುತಿಸುವಾಗ ಶ್ರೇಷ್ಠ ಕವಿಗಳಾದ ಶ್ರೀ. ಟಿ.ಜಿ.ಭಟ್ಟ ಹಾಸಣಗಿ ಸವ್ಯಸಾಚಿಗಳು ಶ್ರೀ ಎಚ್.ಆರ್.ಅಮರನಾಥ ಉತ್ತಮ ಕವಿಗಳು. ಅಮರ ಪಥವೆ ಮೊದಲಾಗಿ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ತಾಲೂಕಿನ ಪ್ರಥಮ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಎಸ್.ಜಿ.ಹೆಗಡೆ ಕಣ್ಣಿಪಾಲರವರು, ಜೊಯಿಡಾ ತಾಲೂಕು ದರ್ಶನ, ಅಟೈ ಕುಣಬಿಯರು ಮುಂತಾಗಿ 3 ಪುಸ್ತಕ ಬರೆದಿದ್ದಾರೆ. ಇವರು ಅಕಾಲದಲ್ಲಿ ತೀರಿಕೊಂಡರು. ನಂತರದ ಅಧ್ಯಕ್ಷ ಶ್ರೀ ಬಿ.ಎಚ್. ನಾಯ್ಕರು ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಶ್ರೀ ವಿಷ್ಣು ಜಿ. ಕಾಮತ್ ಕಿರವತ್ತಿ, ಶ್ರೀ ನಾಗೇಶ ಶಾನಭಾಗರವರೂ ಪತ್ರಿಕಾ ಬರಹಗಾರರಿದ್ದಾರೆ. ಶ್ರೀ ಆರೆನ್ ಕಾವ್ಯನಾಮದ ಆರ್.ಎನ್. ಹೆಗಡೆ ಗೋರ್ಸಗದ್ದೆಯವರು ಶ್ರೀ ಪ್ರಮೋದ ಹೆಗಡೆಯವರೂ ಇಂಗ್ಲೀಷ ಕ್ನನಡ ಬರಹಗಾರರು. 1974ರ ಜಿಲ್ಲಾ ಸಾಹಿತ್ಯ ಸಮ್ಮೇಳನ ನಡೆಸುವಲ್ಲಿ ಆರ್.ಎನ್.ಹೆಗಡೆಯವರ ಪಾತ್ರ ಬುಹುಮುಖ್ಯ. ಸಾಹಿತ್ಯ ಸೇವಕರಾದ ವಯೋವೃದ್ಧ ರಾ.ರಾ.ಹೆಗಡೆ ಶೀಗೆಮನೆಯವರ ಪಾತ್ರವೂ ಸ್ಮರಣೀಯ. ಶ್ರೀ ಸುಬ್ರಾಯ ಬಿದ್ರೆಮನೆ ಅನುಭವಿ ಕವಿಗಳು ಮತ್ತು ಸಂವೇದನಾಶೀಲ ಕತೆಗಾರರು ಬೇಲಿಕಲಾ ಸಂಕಲನ ಹೊರಬಂದಿದೆ. ಭಾವಜೀವಿ ಕಾವ್ಯನಾಮದ ಆರ್.ಎಸ್.ಭಟ್ಟ ಕೊಡಸಳ್ಳಿ ಸದ್ಯ ಕಲ್ಲೇಶ್ವರದವರು ಕವಿತಾ ಸಂಕಲನ ಪ್ರಕಟಿಸುವರಲ್ಲದೆ ಬರೆಯುತ್ತಲೂ ಇದ್ದಾರೆ. ಮುಂದಿನ ಕವಿಗಳಲ್ಲಿ ಶ್ರೀ ಕೃಷ್ಣ ಭಟ್ಟ ನಾಯ್ಕನಕೆರೆ ಮಕ್ಕಳಕವಿ (ಗ.ರಾ.ಭಟ್ಟ) ಗಣಪತಿ ಬಾಳೆಗದ್ದೆ, ಶ್ರೀ ವಿ.ಜಿ.ಗಾಂವ್ಕರ ಬಾಗಿನಕಟ್ಟಾ, ಶ್ರೀ ಸಣ್ಣಪ್ಪ ಭಾಗ್ವತ, ಶ್ರೀ ಗಂಗಾಧರ ದಬ್ಬೆಸಾಲು ಇವರು ಕಾದಂಬರಿಕಾರರೂ ಹೌದು. ಶ್ರೀ ದತ್ತಾತ್ರೇಯ ಕಣ್ಣಿಪಾಲು, ಶ್ರೀ ಶಿವಲೀಲಾ ಹುಣಸಗಿ ಶ್ರೀಮತಿ ಯಮುನಾ ನಾಯ್ಕ, ಶ್ರೀಮತಿ ಗೀತಾ ವಸಂತ ಅಲ್ಲದೆ ಸದ್ಯದ ಸುನಂದಾ ಪಾಠಣಕರ, ಶ್ರೀಮತಿ ಪಾರ್ವತಿ ಕಟ್ಟಿಮನಿ, ಶ್ರೀ ಗಣಪತಿ ಹಾಸ್ಪುರ, ಶ್ರೀ ನಾಗೇಶ ನಾಯ್ಕ, ಶ್ರೀ ಮಕ್ಸೂದ ಶೇಖ, ಶ್ರೀ ಕ.ರಾ.ನಾ. ಕಳಚೆ, ಶ್ರೀ ಕೆ.ವಿ. ಆಚಾರಿ ಇವರೆಲ್ಲಾ ಕವಿಗಳಾದರೆ, ಕಾದಂಬರಿಕಾರರಾಗಿ ದಿ. ಗ.ಸು.ಭಟ್ಟ ಬೆತ್ತಹೇರಿ ಅವರ ಹೆಸರು ಸರ್ವಶ್ರೇಷ್ಠವಾಗಿದೆ. ಯಲ್ಲಾಪುರದಲ್ಲಿ ಕೆಲಸದಲ್ಲಿದ್ದು ರಚಿಸಿದ ಬೆಳ್ಳಿಮೂಡದ ಮುಂಜಾವು, ಶ್ರೀ ಮೇಘರಾಜ ನಾಯ್ಕ ಮೊದಲಿಗರು. ನಂತರ ಕೆ.ವಿ. ಅನುರಾಧ, ಗಣೇಶ ಯಲ್ಲಾಪುರ, ಗಣೇಶ ಪಿ. ನಾಡೋರ, ಶ್ರೀ ಪರಮೇಶಿ ಗುಂಡ್ಕಲ್ ಮುಖ್ಯರು.

            ಶ್ರೀ ಮಂಜುನಾಥ ಬೀರಗದ್ದೆ, ಅಣ್ಣಯ್ಯ ಕಂಚಿಮನೆ, ಶ್ರೀ ದಿವಂಗತ ಮೋಹನ ಕುರಡೆಗಿಯವರನ್ನು ಇಲ್ಲಿ ಸ್ಮರಿಸಲೇಬೇಕು. ವಿಶೇಷವಾಗಿ ಅಂಬರೀಷ ಮೆಲ್ಮನೆ, ಸತ್ಯನಾರಾಯಣ ಚಿಮನಳ್ಳಿ, ಉಮಾ ಹುಬನಳ್ಳಿ, ಶ್ರೀಮತಿ ಮುಕ್ತಾ ಶಂಕರ, ಕವಿಯಿತ್ರಿ, ಸಂಗೀತಗಾರ್ತಿ ಗಮಕವಾಚನದಲ್ಲಿ ಪ್ರಖ್ಯಾತರು. ಕಿರವತ್ತಿಯ ಶ್ರೀ ನಾಗರಾಜ ಹುಡೇದ ಪ್ರಸಿದ್ಧ ಕವಿಗಳು. ಶ್ರೀ ರಾಮಚಂದ್ರ ಎಂ.ಶೇಟ್ (ಆರ್ಯ). ಶ್ರೀ ಡಿ.ಜಿ.ಭಟ್ಟ ವಜ್ರಳ್ಳಿ, ಶ್ರೀ ನಾಗೇಶ ಅಣವೆಕರ(ಕನ್ನಡ-ಕೊಂಕಣಿ ಕವಿಗಳು) ಕೆಲವರು ಪುಸ್ತಕ ಪ್ರಕಟಿಸಿದ್ದಾರೆ. ಪತ್ರಿಕೆಗಳಿಗೆ ಹಲವರು ಬರೆಯುತ್ತಿದ್ದಾರೆ. ಭರವಸೆ ಹುಟ್ಟಿಸುವ ಇನ್ನೂ ಕೆಲವರು ತೆರೆಮರೆಯಲ್ಲಿದ್ದಾರೆ. ಚುಟುಕು ಕವಿ ಶ್ರೀ ವಿ.ಜಿ.ಭಟ್ಟ ಬಾಳಕಲ, ಕುಟುಕು ಪರಿಷತ್ತಿನ ಅಧ್ಯಕ್ಷರೂ ಹೌದು. ಪ್ರಾರಂಭ ಕವಿಯಾದ ಶ್ರೀ ಟಿ.ಸಿ.ಗಾಂವ್ಕರ, ಎನ್.ಸಿ.ಗಾಂವ್ಕರರು, ಕವಿ ಸಮ್ಮೇಲನದಲ್ಲಿ ಭಾಗವಹಿಸಿದ್ದಾರೆ. ಶ್ರೀ ಈಶ್ವರ ತೋಟಮನೆ, ಶ್ರೀ ಟಿ.ಎಸ್. ತಿಲಕರಾಜ, ಹಿರಿಯ ಕವಿ ಶ್ರೀರಂಗಕಟ್ಟಿಯವರನ್ನು ಮರೆಯಲಾಗದು. ನನ್ನ ವಿಹಂಗಮ ನೋಟಕ್ಕೆ ಸಿಲುಕದ ಇನ್ನೂ ಹಲವರು ಕಾವ್ಯ ಕೃಷಿಯಲ್ಲಿ ತೊಡಗಿದ್ದಾರೆ. ಕಾದಂಬರಿ ಪತ್ರಿಕೆ ಇತರೆ ಸಾಹಿತ್ಯದ ಬಗ್ಗೆ, ಕಾದಂಬರಿಗಳ ಬಗ್ಗೆ ಸ್ಥೂಲ ವಿವೇಚನೆ ಮಾಡಲಾಗಿದೆ. ಆದರೂ ಹಲವು ಕಾದಂಬರಿ ಬರೆದು ಲಲಿತಾಪಂಚಮಿಯಂಥ ಶ್ರೇಷ್ಠ ಕೃತಿ ಕೊಟ್ಟ ಶ್ರೀ ವಿ.ಎಸ್. ಭಟ್ಟ ಮುಂಡಗೋಡಿಯವರು ಖ್ಯಾತನಾಮರು. ಮಾನ್ಯ ನಮ್ಮ ಹಿಂದಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷರೂ ರಾಜ್ಯಮಟ್ಟದ ಕತೆಗಾರರೂ ಹಲವಾರು ಪ್ರಶಸ್ತಿ ಪುರಸ್ಕøತರೂ ಆದ ಶ್ರೀಧರ ಬಳಗಾರರು ಸಣ್ಣಕತೆಯಂತೆ ಕಾದಂಬರಿ ಕ್ಷೇತ್ರದಲ್ಲಿ ಹೆಸರಾಂತರು. ಕೇದಿಗೆಯ ಬನದಲ್ಲಿಕೃಷಿ ಜನಮೆಚ್ಚುಗೆ ಪಡೆದಿದೆ. ಕತೆಗಾರರಾಗಿ ಜರ್ಮನಿಯ ಟೊ.ಟೊ.ಪ್ರಶಸ್ತಿ ಪಡೆದ ಪ್ರಜಾವಾಣಿ ಕೆಲಸದಲ್ಲಿರುವ ಶ್ರೀ ಪದ್ಮನಾಭ ಭಟ್ ಕೆಲ ವರ್ಷಗಳ ಹಿಂದೆ ಪ್ರಸಿದ್ಧ ಕತೆಗಾರರಾಗಿ ಸುಧಾ ಮಯೂರ ಪತ್ರಿಕೆಯಲ್ಲಿ ಪ್ರಕಟಿಸಿದ ಕತೆಗಾರ ಶ್ರೀ ನಾಗೇಶ ಭಟ್ಟ ಬಾಳಗಿಮನೆ, ಶ್ರೀ ಸು.ಮ.ಭಟ್ಟ ಹಾಸ್ಯ ಬರೆಹಗಾರರು ಉತ್ತರದಾಯಿತ್ವ ಪಡೆದಿದ್ದಾರೆ.

            ಪ್ರಸಿದ್ಧ ಪತ್ರಿಕಾ ಸಂಪಾದಕರಾಗಿ ಶ್ರೀ ತಿಮ್ಮಪ್ಪ ಭಟ್ಟ (ವಿಜಯ ಕರ್ನಾಟಕ) ಶ್ರೀ ಹರಿಪ್ರಕಾಶ ಕೋಣೆಮನೆ (ವಿಜಯವಾಣಿ) ಮಾಧ್ಯಮ ಕಲರ್ಸ ಟಿವಿಯ ಪರಮೇಶಿ ಗುಂಡ್ಕಲ್, ಪ್ರಜಾವಾಣಿಯ ರಾಮಕೃಷ್ಣ ಸಿದ್ರಪಾಲ, ಲೋಕ ಶಿಕ್ಷಣ ಸಂಸ್ಥೆಯ ಶ್ರೀ ಗೋಪಾಲಕೃಷ್ಣ ಹೆಗಡೆ ಸೂಳಗಾರ ಇವರೆಲ್ಲರ ಮಾಧ್ಯಮ ಸೇವೆ ಅನುಪಮ. ಮರಾಠಿ ಸಾಹಿತ್ಯದ ಅನುವಾದಕರಾಗಿ ಪ್ರಖ್ಯಾತರಾದ ಶ್ರೀ ಚಂದ್ರಕಾಂತ ಪೋಕಳೆ, ಶ್ರೀ ಪದ್ಮಾಕರ ಪಾಯದೆ, ಜ್ಯೋತಿಷ್ಯ ಗ್ರಂಥಕರ್ತ ಶ್ರೀ ಗಣೇಶ ಹೆಗಡೆ ಇವರೆಲ್ಲರ ಜೊತೆಗೆ ಬೆಂಗಳೂರಿನಲ್ಲಿರುವ ಬಿಸಗೋಡಿನ ಯ. ಕೃಷ್ಣ ಶರ್ಮಾ, ಶ್ರೀ ಮೊಟ್ಟೆಪಾಲು ನಾರಾಯಣ ಭಟ್ಟರು. ವಿಜಯವಾಣಿಯಲ್ಲಿ ಸಂಸ್ಕøತ ಸಂಭಾಷಣೆ ಬರೆಯುತ್ತಿರುವ ಶ್ರೀ ಗಣಪತಿ ಹೆಗಡೆ ಬೆಳಖಂಡ, ಶ್ರೀ ವಿಘ್ನೇಶ್ವರ ಭಟ್ಟ ಬಿಸಗೋಡು ಪ್ರಖ್ಯಾತ ಸಂಶೋಧಕ ಇಂಗ್ಲೀಷ್ ಗ್ರಂಥಕಾರ ಯಜ್ಞೇಶ್ವರ ಶಾಸ್ತ್ರೀ ಕೋಸಗುಳಿ ಯಲ್ಲಾಪುರಕ್ಕೆ ಹೆಮ್ಮೆ ತಂದವರು. ಯಲ್ಲಾಪುರದಲ್ಲಿ ಪ್ರಥಮತ: ಆಯುರ್ವೇದಕ್ಕೆ ಮೀಸಲಿಟ್ಟ ಡಾ|| ಶ್ರೀ ಜಿ.ಪಿ.ಭಟ್ಟ ಮದ್ಗುಣಿಯವರು ಆಯುರ್ವೇದದ ಬಗ್ಗೆ ಪತ್ರಿಕೆ ಹೊರಡಿಸುತ್ತಿದ್ದರು. ಸೇವಾನಿರತ ಯಲ್ಲಾಪುರದ ವೈದ್ಯವೃಂದ ಸೇವಾ ಭಾವನೆಯಿಂದಲೇ ಕೆಲಸ ಮಾಡುತ್ತಿದ್ದಾರೆ.

            ಯಲ್ಲಾಪುರದ ಮಾರಿಕಾಂಬಾ ಸ್ಟೋರ್ಸ ಕ್ಲಬ್, ಸ್ಟಾರಸ್ಪೋಟ್ರ್ಸ ಕ್ಲಬ್‍ಗಳು ಕ್ರೀಡಾ ಚಟುವಟಿಕೆಯಲ್ಲಿ ನಿರವಾಗಿವೆ. ಅಂತೆಯೇ ಕನ್ನಡಪರ ಸಂಘಟನೆಗಳಾದದ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ವೈಶ್ಯ ಸಮಾಜ, ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಚಟುವಟಿಕೆ, ರಾಜ್ಯ ಸರಕಾರಿ ನೌಕರರ ಸಂಘಗಳು ಕನ್ನಡಕ್ಕಾಗಿ ದುಡಿಯುತ್ತಿವೆ.

            ವ್ಯಂಗಚಿತ್ರಕಾರರು ತಾಲೂಕಿನ ವ್ಯಂಗ ಚಿತ್ರಕಾರರು ರಾಜ್ಯದಲ್ಲಿಯೇ ಪ್ರಸಿದ್ಧಿ ಪಡೆದಿದ್ದಾರೆ. ಶ್ರೀ ನಾಗೇಂದ್ರ ಯಲ್ಲಾಪುರ ಯಲ್ಲಾಪುರದ ಹಲಸ್ಕಂಡದವರು. ವ್ಯಂಗ ಚಿತ್ರದಲ್ಲಿ ಸಿದ್ಧಹಸ್ತರಾದ ಇವರು ಯಲ್ಲಾಪುರ ಪ್ರಕಾಶನ ಹೆಸರಿನ ಪ್ರಕಾಶನ ಸಂಸ್ಥೆ ಮೂಲಕ ಪ್ರಸ್ತಕ ಪ್ರಕಟಿಸುತ್ತಿದ್ದಾರೆ. ಶ್ರೀ ಸತೀಶ ಯಲ್ಲಾಪುರ, ಶ್ರೀ ಗಣಪತಿ ಕಂಚೀಪಾಲ, ನೀರ್ನಳ್ಳಿ ಗಣಪತಿ, ಶ್ರೀ ಪ್ರಕಾಶ ಯಲ್ಲಾಪುರ ಮುಂತಾದವರು ಪ್ರಸಿದ್ಧರೆನಿಸಿದ್ದಾರೆ.

            ಒಳ್ಳೆಯ ಸಾಹಿತ್ಯ ಪರಿಷತ್ ಅಧ್ಯಕ್ಷರು ನಮಗೆ ಸಿಕ್ಕಿದ್ದಾರೆ. 1995ರಿಂದ ಪುನರುಜ್ಜೀವನಗೊಂಡ ಪರಿಷತ್ತಿನ ಪ್ರಥಮ ಅಧ್ಯಕ್ಷರಾದ ಶ್ರೀ ನಾ.ಸು. ರವರ ಶ್ರಮ ಅತಿಹೆಚ್ಚಿನದು. ಶ್ರೀಯುತರ ಕಾಲದಲ್ಲಿ ಕಾವ್ಯ ಕಮ್ಮಟ, ಚಿತ್ತಾಲ ಚಿಂತನಗೋಷ್ಠಿ, ಚಂದ್ರಶೇಖರ ಕಂಬಾರ, ಚಂ.ಪಾ ರವರಿಂದ ಪ್ರಾತ್ಯಕ್ಷಿತೆ ನಡೆಯಿತಲ್ಲದೆ, ಎಂದಿಗೂ ಚಿರಸ್ಥಾಯಿಯಾಗಿರುವ ಸಾಹಿತ್ಯ ಭವನ ನಿರ್ಮಾಣವಾದುದು. ಜಿಲ್ಲೆಯ ಇತಿಹಾಸದಲ್ಲಿ ಮೈಲುಗಲ್ಲು. ಕಾರಣೀಕರ್ತರಾದ ಶ್ರೀ ಗೋಪಾಲಕೃಷ್ಣ ಬೇಕಲರವರು ಮತ್ತು ಆಗಿನ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕರಾದ ಶ್ರೀ ಕೆ.ಎಲ್.ಅಲೇಕರವರು ಅಭಿನಂದನಾರ್ಹರು. ಮುಂದಿನ ಮೂರು ಅವಧಿ ಅಧ್ಯಕ್ಷರಾದ ಶ್ರೀ ಆರ್.ಎಂ.ಭಟ್ಟ ಬಾಳಕಲ್ ರವರ ಕಾರ್ಯ ಅವಧಿಯಲ್ಲಿ 2 ಸಾಹಿತ್ಯ ಸಮ್ಮೇಳನ ನಡೆದು ಮಾನ್ಯ ಶ್ರೀ ನಾ.ಸು.ರವರು ಶ್ರೀ ವನರಾಗ ಶರ್ಮಾ ರವರು ಅಧ್ಯಕ್ಷರಾದರೆ ಮುಂದಿನ ಅಧ್ಯಕ್ಷ ಶ್ರೀರಂಗ ಕಟ್ಟಿಯವರ ಕಾಲದಲ್ಲಿ ನಾಡಿನ ಪ್ರಸಿದ್ಧ ಸಾಹಿತಿ ಶ್ರೀಧರ ಬಳಗಾರ ಅಧ್ಯಕ್ಷತೆಯಲ್ಲಿ 3ನೇ ತಾಲೂಕಾ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿದೆ. ಪ್ರಸ್ತುತ ಉತ್ಸಾಹಿ ತರುಣರೂ, ಪಾದರಸದ ಚುರುಕುತನದವರೂ ಆದ ವೇಣುಗೋಪಾಲ ಮದ್ಗುಣಿಯವರ ಅಧ್ಯಕ್ಷತೆಯಲ್ಲಿ ಸಾಹಿತ್ಯದ ರಥಯಾತ್ರೆ ಸಾಗಿದೆ, ಸಾಗುತ್ತಿದೆ.

ಆತ್ಮೀಯರೇ, ಹೇಳಲೇಬೇಕಾದ ಅಂತರಂಗದ ಮಾತುಗಳನ್ನು ಹೇಳುವಾಗ ಸಮಗ್ರ ವಿಕಾಸದ ಬಗ್ಗೆ ಚಿಂತನೆ ನಡೆಸಬೇಕಾಗಿ ಬಂದಿದ್ದರಿಂದ ಸುದೀರ್ಘ ವ್ಯಾಖ್ಯೆಯ ಅವಶ್ಯಕತೆಯುಂಟಾಗಿದೆ. ಜೊತೆಗೆ ಉತ್ತಮ ಕೃಷಿಕರು, ಸಮಾಜ ಸೇವಕರು, ರಾಜಕಾರಣಿಗಳು, ವ್ಯಾಪಾರಿಗಳು, ನ್ಯಾಂiÀiವಾದಗಳು, ವೈದ್ಯರು, ತಾಂತ್ರಿಕ ತಜ್ಞರು ಇವರೆಲ್ಲರ ಪಾಲು ಯಲ್ಲಾಪುರದ ಅಭಿವೃದ್ಧಿಯಲ್ಲಿದೆ. ರಾಜಕೀಯವಾಗಿ ಮಾನ್ಯ ಉಸ್ತುವಾರಿ ಸಚಿವರಾದ ಆರ್.ವಿ.ದೇಶಪಾಂಡೆಯವರು, ಮಾಜಿ ಮಂತ್ರಿಗಳಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಹಲವು ಬಾರಿ ಪ್ರತಿನಿಧಿಸಿದ ಕ್ಷೇತ್ರ ಇದು.

ಸವಾಲುಗಳು ಆಶಯಗಳು

            ತಾಲೂಕಿನ ಸಾಂಸ್ಕøತಿಕ, ಸಾಹಿತ್ಯದ, ಕಲೆ, ಸಾಮಾಜಿಕ ಬದಲಾವಣೆಗಳು ದಾಪುಗಾಲು ಹಾಕಿ ಓಡುತ್ತಿದ್ದರೂ ನಾವು ನಮ್ಮ ಪ್ರಗತಿಯ ಸಿಂಹಾವಲೋಕನ ಮಾಡಿಕೊಳ್ಳಬೇಕಾಗಿದೆ. ದಿನೇ ದಿನೇ ಹೆಚ್ಚುತ್ತಿರುವ ಸವಾಲುಗಳನ್ನು ಎದುರಿಸಬೇಕಾಗಿದೆ. ಹಲವಾರು ನೈಸರ್ಗಿಕ ಆಘಾತಗಳಿಂದ ನಮ್ಮ ಹಳ್ಳಿಗರ ಬದುಕು ಬರ್ಬಾದ್ ಆಗಿದೆ. ಜೊತೆಗೆ ಮಾನವನಿರ್ಮಿತ ಸಮಸ್ಯೆಗಳೂ ಆದ್ವಾನಗಳು ನಮ್ಮನ್ನು ಜರ್ಝರಿಸುತ್ತಿದ್ದು ಭೂಮಿ ಬರಡಾಗಿದೆ.  ತೋಟಗಳು ಸಾಯುತ್ತಿವೆ. ಎಂದೂ ಬತ್ತದ ಜಲಪಾತಗಳು ಸೊರಗಿ ಸುಕ್ಕಾಗಿವೆ. ಕೊಳ್ಳುಬಾಕ ಸಂಸ್ಕøತಿಯ ವ್ಯಾಮೋಹದ ಪ್ರವಾಹದಲ್ಲಿ ಸಿಲುಕಿದ ನಮ್ಮ ಪಾವನ ಬದುಕು ಚೆಲ್ಲಾಪಿಲ್ಲಿಯಾಗಿದೆ. ಹಳ್ಳಿನಗರಗಳ ಅಂತರ ದಿನೇ ದಿನೇ ಹೆಚ್ಚುತ್ತಿದ್ದು ವೃದ್ಧಾಶ್ರಮದ ಗ್ರಾಮೀಣ ಜನತೆ ಇಳಿವಯಸ್ಸಿನಲ್ಲಿ ಗತ ಯೌವನದ ವೈಭವದ ದಿನಗಳ ಮೆಲುಕಿನಲ್ಲಿ ದಿನ ದೂಡುತ್ತಿದ್ದಾರೆ. ಇದಕ್ಕೆ ಪರಿಹಾರ ಇಲ್ಲವೆ ? ಜನತೆ  ಹಳ್ಳಿಗಳ ಕಡೆ ತಿರುಗಿ ನೋಡುವಂತೆ ಮಾಡುವ ಶಕ್ತಿ ನಮ್ಮ ಗ್ರಾಮೀಣ ಭಾಗಕ್ಕೆ ಬರುವುದೆಂತು ? ನಮ್ಮ ಹಳ್ಳಿಗಳು ಸರ್ವತೋಮುಖವಾಗಿ ಜೀವಂತವೂ, ಶ್ರೀಮಂತವೂ ಆಗುವುದು ಸಾಧ್ಯವಿಲ್ಲವೆ ? ಅದು ಯಾವಾಗ ? ಇನ್ನೂ ಕಾಲ ಕೂಡಿ ಬರಲಿಲ್ಲವೆ ? ಮಾನವ ನಿರ್ಮಿತ ಆಣೆಕಟ್ಟೆಯ ನಿರ್ವಸಿತರು ಇನ್ನೂ ಪರಿಪೂರ್ಣ ಬದುಕು ಕಟ್ಟಿಕೊಂಡಿಲ್ಲ. ಮತ್ತು ಯೋಜನೆಗಳ ಭೂತ ನಮ್ಮನ್ನು ಹೆದರಿಸಿ ಈಗಾಗಲೇ ಯಲ್ಲಾಪುರ ನಗರದಲ್ಲಿ ಹೋಗುವ ಹೆದ್ದಾರಿಗಳು ನಗರವಾಸಿಗಳ ನಿದ್ದೆಗೆಡಿಸಿದರೆ, ಬರಲಿರುವ ಸೂಕ್ಷ್ಮ ಪರಿಸರ ವಲಯ ತಾಲೂಕಿನ ಉತ್ತರ ಭಾಗಗಳಿಗೆ ಕಂಟಕ ಪ್ರಾಯವಾಗಿದೆ. ಆಗಲೇ ಬೇಕಾದ ಹುಬ್ಬಳ್ಳಿ- ಅಂಕೋಲಾ ರೈಲು ಮಾರ್ಗವನು ನಾವು ಸ್ವಾಗತಿಸಲೇಬೇಕು. ಆದರೆ ಅದರಿಂದ ಉದ್ಭವಿಸುವ ಪರಿಹಾರದ ಮತ್ತು ಪರಿಸರ ಸಮಸ್ಯೆಗಳಿಗೂ ನಾವೆಲ್ಲರೂ ಪರಿಹಾರ ಕಂಡುಕೊಳ್ಳಬೇಕಾಗಿದೆ.



            ಸ್ವಾತಂತ್ರ್ಯ ಬಂದದ್ದು ಇರಲಿ ಕರ್ನಾಟಕ ಏಕೀಕರಣವೇ ಆಗಲಿ ಉತ್ತರಕನ್ನಡ ಜಿಲ್ಲೆ ಮತ್ತು ನಮ್ಮ ತಾಲೂಕಿಗೆ ಅನ್ಯಾಯವೇ ಆಗಿದೆ. ಮುಂಬೈ ಕರ್ನಾಟಕದ ಟೆನೆನ್ಸಿ ಕಾಯ್ದೆಯಿಂದ ಜಮೀನುದಾರರು ತೊಂದರೆ ಪಟ್ಟರೆ ಕರ್ನಾಟಕ ಭೂ ಸುಧಾರಣೆ ಕಾನೂನಿಂದಲೂ ತೊಂದರೆ ಆಗಿದೆ. ಗಣಿಗಾರಿಕೆ ಆಣೆಕಟ್ಟು ಮೊದಲಾದ ರಾಜ್ಯ ಸರಕಾರದ ನಿರ್ಧಾರಗಳು ಅದೇರೀತಿ ಕೈಗಾ ಯೋಜನೆಯ, ಕೇಂದ್ರ ಸರಕಾರದ ಯೋಜನೆಗಳು ಪರಿಸರ ನಾಶಕ್ಕೆ ಕಾರಣವಾಗಿವೆ. ಸಿಡಿದೆದ್ದು ಜನತೆ ಸ್ವರ್ಣವಲ್ಲೀ ಸ್ವಾಮಿಗಳ ನೇತೃತ್ವದಲ್ಲಿ ಹೋರಾ ನಡೆಸಿ ಯಶಸ್ವಿ ಆದರೂ ಯೋಜನೆಯ ಬೇರೊಂದು ರೀತಿಯ ರೂಪದ ಬಗ್ಗೆ ಜನರಲ್ಲಿರುವ ಆತಂಕ ಇನ್ನೂ ದೂರವಾಗಿಲ್ಲ. ಇವೆಲ್ಲವುಗಳಿಂದ ವಿಚಲಿತರಾಗಿರುವ ಹಳ್ಳಿಯ ಗಂಡುಗಳನ್ನು ಮದುವೆ ಆಗಲು ಹೆಣ್ಣುಗಳು ಬರುತ್ತಿಲ್ಲ. ಕಾರಣ ಹಳ್ಳಿ ಹುಡುಗರು ಆಕಾಶ-ಭೂಮಿ ಸಮೀಕ್ಷೆ ಮಾಡುವುದೊಂದೇ ಆಗಿದೆ.
ಆಶಯ ಮತ್ತು ಪರಿಹಾರ

            ಸಾಕಷ್ಟು ಜಾನಪದ ಮತ್ತು ಶಾಸ್ತ್ರೀಯ ಕಲೆಗಳಿಂದಲೂ ಕ್ರೀಡಾಪಟುಗಳಿಂದಲೂ ವೈವಿಧ್ಯತೆಯ ತೋಟಗಾರಿವ ಯಲ್ಲಾಪುರಕ್ಕೆ ಸುಧಾರಿತ ಸುಸಜ್ಜಿತ ಕಲಾಶಾಲೆಗಳ ಅಗತ್ಯವಿದೆ. ಎಲ್ಲದಕ್ಕೂ ಸ್ಪಂಧಿಸುವ ಮುಗ್ದ ಹಾಗೂ ವೈಚಾರಿಕತೆ ಪ್ರೇಕ್ಷಕರಿಗೆ ಬೇಕಾದ ಅವಶ್ಯಕತೆಯತ್ತ ನಮ್ಮ ಗಮನ ಬೇಕು. ಅನುಭವಿ ಮತ್ತು ಪ್ರಬುದ್ಧತೆಯ ಕೊರತೆ ಇರದ ಕಲಾವಿದರನ್ನು ಸೃಜಿಸಬೇಕಾದರೆ ಎಲ್ಲ ರೀತಿಯ ಜಾನಪದ ಶಾಸ್ತ್ರೀಯ ಆದಿವಾಸಿಗಳ ಕಲೆಗೆ ಆಶ್ರಯವಾದ ಕಲಿಕಾ ಕೇಂದ್ರವಿರುವ ನಮ್ಮ ಶಿಕ್ಷಣ ಕೇಂದ್ರಗಳು ಎತ್ತರಕ್ಕೆ ಬೆಳೆಯಬೇಕಾಗಿದೆ. ಹಳ್ಳಿಯ ಶಾಲೆಗಳು ಮುಚ್ಚುತ್ತಿವೆ. ಮುಚ್ಚಿವೆ. ಮುಚ್ಚುತ್ತಿರುವ ಶಾಲೆಗಳ ಪುನರುಜ್ಜೀವನ ಆಗಲೇಬೇಕು. ಪ್ರಕೃತಿ ಪರಿಸರದ ನಡುವಿನ ಶಿಕ್ಷಣ ಮುಂದುವರೆಯಲಿ. ಸುಂದರ ನಿಸರ್ಗದ ನಡುವೆ ಮತ್ತೆ ಶಾಲೆಯ ಗಂಟೆ ಸದ್ದು ಕೇಳಿಸಬೇಕು. ಗ್ರಾಮೀಣ ಪ್ರದೇಶದ ತಂದೆ ತಾಯಿಗಳು ನಗರದ ಆಡಂಬರದ ವ್ಯಾಪಾರಿ ಕೇಂದ್ರವಾಗಿರುವ ಶಾಲೆಗಳಿಗೆ ಮಾರು ಹೋಗಿ ಮಕ್ಕಳನ್ನು ಹಳ್ಳಿಯ ಶಾಲೆ ತಪ್ಪಿಸಬಾರದು. ಶಿಕ್ಷಣ ಸೌಲಭ್ಯ, ಶಿಕ್ಷಣ ಮಟ್ಟ ಎತ್ತರಿಸುವ ವ್ಯವಸ್ಥೆ ಆಗಬೇಕಾದುದು ಅವಶ್ಯ.
ಹೊಸ ಪೀಳಿಗೆಯ ಸಾಹಿತಿಗಳೆ-ಕವಿಗಳೇ.

            ಪ್ರಬುದ್ಧರಾದವರಿಗೆ ಜ್ಞಾನದ ಹಸಿವು ಹೆಚ್ಚಿರುತ್ತದೆ. ಹಳೆಯ ಕವಿಗಳು ಸಾಕಷ್ಟು ಕೃತಿ ರಚನೆ ಮಾಡಿದರೂ ಪುಸ್ತಕ ಪ್ರಕಟಿಸಲಿಲ್ಲ. ಅವರಿಗೆ ಸೌಲಭ್ಯಗಳೂ ಇರಲಿಲ್ಲ. ಸದ್ಯ ಸುಶಿಕ್ಷಿತ ಯುವಕ-ಯುವತಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಸಾಹಿತ್ಯಿಕ ಅರಮನೆ ಶೃಂಗರಿಸುವ ಕೆಲಸ ಮಾಡುತ್ತಿದ್ದಾರೆ. ಹಲವು ಪ್ರಶಸ್ತಿ ಬಾಚಿಕೊಳ್ಳುತ್ತಿದ್ದಾರೆ. ಸಾಹಿತ್ಯದ ಪಂಥಗಳ ಗಾಳಿ ಯಲ್ಲಾಪುರಕ್ಕೂ ವ್ಯಾಪಿಸುತ್ತದೆ. ಗೆಳೆಯರೇ ಖಂಡಿತ ಪಂಥಗಳ ಪಂಥಾಹ್ವಾನ ನಮಗೆ ಬೇಕಿಲ್ಲ. ಜಿಲ್ಲೆಯ ಹಿರಿಯ ಕವಿಗಳು ನಮಗೆ ದಾರಿ ದೀಪವಾಗಿದ್ದಾರೆ. ಶ್ರೀ ದಾಮೋದರ ಚಿತ್ತಾಲ, ಶ್ರೀ ಗಂಗಾಧರ ಚಿತ್ತಾಲ, ಶ್ರೀ ದಿನಕರ ದೇಸಾಯಿ, ಸು.ರಂ. ಎಕ್ಕುಂಡಿ, ಎಂ.ಅಕಬರಲಿ ಮೊದಲಾದ ಕವಿಗಳಲ್ಲದೆ, ಶ್ರೀ ಜಯಂತ ಕಾಯ್ಕಿಣಿ, ಶ್ರೀ ಟಿ.ಜಿ.ಭಟ್ಟ ಹಾಸಣಗಿ ಇವರೆಲ್ಲರ ಮಾರ್ಗದರ್ಶನವಲ್ಲದೆ ತಾಲೂಕಿನ ಶ್ರೀ ನಾ.ಸು. ಭರತನಹಳ್ಳಿ, ವನರಾಗ ಶರ್ಮಾರಂತಹವರ ಮಾರ್ಗದಲ್ಲಿ ನಡೆಯೋಣ. ಇಲ್ಲಿ ಗಂಗಾಧರ ಚಿತ್ತಾಲರ ಮನುಕುಲದ ಹಾಡುಸಂಗ್ರಹದಲ್ಲಿನ ಹರಿವ ನೀರಿದುಎನ್ನುವ 3ನೇ ಪ್ಯಾರಾದ ಸಾಲುಗಳು ನೋಡಿ.

ತಡೆಯದೊ ಋತುಮಾನ
ತಡೆಯದೊ ಪ್ರಾಣಗತಿ
ತಡೆಯ ದವ್ಯಾಹತವು ಸರಿವಕಾಲ
ಏರಿತೀರಿದ ಮೇಲೆ ಬಹುದು ಬರಿ ಇಳಿಜಾರೆ
ಕವಿದು ಬಹ ನೆರಳುಗಳೇ ಸುತ್ತಲೆಲ್ಲ.



            ಎಂಥ ಪ್ರತೀಕ, ಸುಮಾರು 60ರ ದಶಕದಲ್ಲಿ ಪ್ರಕಟವಾದ ಈ ಕವಿತೆ ಇಂದಿಗೂ ಎಲ್ಲರ ವಿಮರ್ಶೆಗೆ ಪಾತ್ರವಾಗುತ್ತಾ ನವೋನ್ಮೇಷಶಾಲಿಯಾಗಿದೆ. ಹೇಳದೆ ಕೇಳದೆ ಸರಿವ ಕಾಲ ವೃದ್ಧಾಪ್ಯದಲ್ಲಿ ನಮ್ಮ ನೆರಳುಗಳೇ ನಮ್ಮನ್ನು ಅಣಕಿಸುತ್ತವೆ. ಎನ್ನುವ ಮಾತು ಚಿರಂತನ ಸತ್ಯ.
            ಯಲ್ಲಾಪುರದ ಇತಿಹಾಸಗಳ ಬಗ್ಗೆ ನಾವು ಲಕ್ಷ್ಯ ಕೊಡುತ್ತಿಲ್ಲ. ಇಲ್ಲಿ ಶಾಸನಗಳು, ಸ್ಮಾರಕಗಳು, ಕೋಟೆಗಳ ಬಗ್ಗೆ ನಮಗೆ ಗೊತ್ತಿಲ್ಲ. ಇವುಗಳ ಬಗ್ಗೆ ಸಂಶೋಧನೆ ಆಗಬೇಕು. ಸ್ಮಾರಕಗಳನ್ನು ರಕ್ಷಿಸುವ ಕೆಲಸ ಆಗಬೇಕು.

            ಯಲ್ಲಾಪುರಕ್ಕೆ ಬರಬೇಕಾದ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗ ಶೀಘ್ರ ಕಾರ್ಯಾರಂಭ ಆಗುವುದೆಂದು ನಂಬೋಣ. ಪೂರ್ಣ ಪ್ರಮಾಣದ ಕುಡಿವ ನೀರಿನ ಯೋಜನೆ ಯಲ್ಲಾಪುರಕ್ಕೆ ಬರಲಿ. ಸಾಕಷ್ಟು ಶ್ರೀಮಂತ ಉದ್ದಿಮೆದಾರರು ಜಿಲ್ಲೆಯಲ್ಲಿದ್ದಾರೆ. ಪರಿಸರ ಸ್ನೇಹಿ ಉದ್ದಿಮೆಯನ್ನು ಯಲ್ಲಾಪುರದಲ್ಲಿ ಸ್ಥಾಪಿಸುವ ಯತ್ನ ಮಾಡಲಿ.

            ಸರಕಾರದ ಶ್ರೇಷ್ಠ ಪ್ರಶಸ್ತಿಗಳಿಗೆ ಭಾಜನರಾಗುವ ಅರ್ಹತೆಯುಳ್ಳ ಹಲವಾರು ಯಕ್ಷಗಾನ ಕಲಾವಿದರಿಗೆ ಇತರೆ ಜಾನಪದ ಕಲಾವಿದರು, ಸಾಹಿತಿಗಳು ಪತ್ರಕರ್ತರು, ನಾಟಿವೈದ್ಯರು, ಕುಶಲಕರ್ಮಿಗಳು. ರಂಗಕರ್ಮಿಗಳು ಯಲ್ಲಾಪುರದಲ್ಲಿದ್ದಾರೆ. ಅವರಿಗೆ ಸೂಕ್ತ ಸ್ಥಾನಮಾನ ದೊರೆಯಬೇಕೆಂಬುದು ನನ್ನ ಆಶಯ. ಜಿಲ್ಲೆಯಲ್ಲಿ ಜಾನಪದ, ಯಕ್ಷಗಾನ ಆಕಾಡೆಮಿಗೆ ಸದಸ್ಯರ ಅಧ್ಯಕ್ಷರು ಆಗುವ ಅರ್ಹತೆ ಹೊಂದಿರುವವರಿದ್ದಾರೆ. ಅವರನ್ನು ಸೂಕ್ತ ಸ್ಥಾನಮಾನದೊಡನೆ ಗುರುತಿಸುವಂತಾಗಬೇಕು. ಯಲ್ಲಾಪುರದಲ್ಲೂ ಇಂಥಹ ವ್ಯಕ್ತಿಗಳಿದ್ದಾರೆ. ಒಬ್ಬರಿಗಾದರೂ ಆ ಸ್ಥಾನ ದೊರಕಲಿ ಎಂದು ಆಶಯ.

ಜಿಲ್ಲೆಯ ಸಾಂಸ್ಕøತಿಕ ಕ್ಷೇತ್ರ ಹೆಮ್ಮೆಯಿಂದ ಕುಣಿದಾಡುತ್ತಲಿದೆ. ಕಾರಣ ಜಾನಪದ ಕಲಾವಿದೆ, ಹಾಡುಗಾರ್ತಿ ಸುಕ್ರಜ್ಜಿಗೆ ಸಿಕ್ಕ ಪದ್ಮಶ್ರೀ ಪ್ರಶಸ್ತಿ. ಈಗ್ಗೆ 3 ವರ್ಷದ ಹಿಂದೆ ಚಿಟ್ಟಾಣಿಯವರಿಗೆ ಯಕ್ಷಗಾನಕ್ಕೆ ಸಿಕ್ಕ ಪದ್ಮಶ್ರೀ ಎಲ್ಲ ರೋಮಾಂಚನಗೊಳಿಸಿದೆ. ಅಲ್ಲದೆ ಪದ್ಮಭೂಷಣ, ಪದ್ಮವಿಭೂಷಣಕ್ಕೆ ಭಾಜನರಾಗುವ ಸಾಕಷ್ಟು ಹಿರಿಯರಿದ್ದಾರೆ. ತಾಲೂಕಿನಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದವರೂ ಇಲ್ಲ. ಈ ಕೊರತೆ ನೀಗಬೇಕು. ಕಲಾವಿದರಿಗೆ ಸಾಹಿತಿಗಳಿಗೆ ಕಿವಿಮಾತು; ಯಕ್ಷರಂಗಕ್ಕೆ ಹಾಸ್ಯದ ಕೊಡುಗೆ ತಾಲೂಕಿನಲ್ಲಿ ಸಾಲದು. ಸಾಹಿತ್ಯದಲ್ಲೂ ಈ ವಿಭಾಗ ಖಾಲಿ ಇದೆ. ಇದನ್ನು ತುಂಬಬೇಕು. ತಾಲೂಕಿನ ಪ್ರಸಿದ್ಧ ಕವಿಗಳ ಕಾವ್ಯಾಧ್ಯಯನ ಕಮ್ಮಟ ಶಿಬಿರವಾಗಿರುವ ಸಾಹಿತ್ಯ ಸಮ್ಮೇಳನ. ವಿಶೇಷ ಕಾರ್ಯಕ್ರಮಗಳು ಗ್ರಾಮೀಣ ಭಾಗದಲ್ಲಿ ನಡೆಯುವಂತಾಗಲಿ. ಜನಸಾಮಾನ್ಯರು ಪಾಲ್ಗೊಳ್ಳುವಂತಾಗಿ ಸಾಹಿತ್ಯದಲ್ಲಿ ಮಹಿಳೆಯರ ಸ್ಥಾನ ಗುರುತಿಸುವಂತಾಗಲಿ ಎನ್ನುವ ಸದಾಶಯದೊಡನೆ.


            ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಒಳ್ಳೆಯ ಕೆಲಸ ಮಾಡುತ್ತಿದೆ. ಮಾನ್ಯ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿಯವರ ನಿರ್ದೇಶನದಲ್ಲಿ ತಾಲೂಕಾಧ್ಯಕ್ಷ ಶ್ರೀ ವೇಣುಗೋಪಾಲ ಮದ್ಗುಣಿಯವರ ನೇತೃತ್ವದಲ್ಲಿ ಸ್ವಾಗತ. ಮಾನ್ಯ ಶಾಸಕರು ಮತ್ತು ತಹಶೀಲ್ದಾರ ತಾಲೂಕಾ ದಂಡಾಧಿಕಾರಿ ಡಿ.ಜಿ.ಹೆಗಡೆಯವರ ಹಿರಿತನದಲ್ಲಿ ಎಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ಯಲ್ಲಾಪುರದ ಸ್ನೇಹಿತರು, ಅಭಿಮಾನಿಗಳು ಸೇರಿ ನನ್ನನ್ನು ವಯೋಧಿಕ್ಯನೆಂದೂ, ಚೂರು-ಪಾರು ಕನ್ನಡ ಸೇವೆ ಈ ಐವತ್ತು ವರ್ಷದಿಂದ ಮಾಡುತ್ತ ಬಂದಿರುವುದನ್ನೂ ಮನಗಂಡು ನನ್ನ ನ್ಯೂನತೆ ದೋಷಗಳನ್ನು ಲೆಕ್ಕಿಸದೆ ಈ ಮಹತ್ವದ ಪೀಠದಲ್ಲಿ ಕುಳ್ಳಿರಿಸಿ ಮೆರವಣಿಗೆ ಮಾಡಿ ಅಧ್ಯಕ್ಷ ಸ್ಥಾನ ನೀಡಿ ಗೌರವಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು. ಯಲ್ಲಾಪುರದ ಈ ನಡು ಕನ್ನಡನಾಡಿನ ಕನ್ನಡ ಬಾಂಧವರಿಗೆ ಕನ್ನಡಕ್ಕಾಗಿ ಕೈ ಎತ್ತುತ್ತಿರುವ ಹಿರಿಕಿರಿಯರಿಗೆ ಕನ್ನಡಪರ ಸಂಘಟನೆಗಳಿಗೆ ಎಲೆಯ ಮರೆಕಾಯಿಯಂತೆ ಸೇವೆ ಸಲ್ಲಿಸುತ್ತಿರುವ ಅಜ್ಞಾತಬಂಧುಗಳಿಗೆ ಎಲ್ಲಾ ಆತ್ಮೀಯ ಮಾದ್ಯಮ ಮಿತ್ರರಿಗೆ ಅಭಿನಂದನೆಗಳೊಡನೆ ;

            ಮಾನ್ಯ ಉತ್ಸಾಹಿ ತರುಣ ಕ.ಸಾ.ಪ. ಅಧ್ಯಕ್ಷ ಮದ್ಗುಣಿಯವರ ಸಂಘಟನೆಯಲ್ಲಿ ಮಾನ್ಯ ಜಿಲ್ಲಾಧ್ಯಕ್ಷರಾದ ಯುವ ಪ್ರತಿಭೆ ಶ್ರೀ ಅರವಿಂದ ಕರ್ಕಿ ಕೋಡಿಯವರ ಹಿರಿತನದಲ್ಲಿ ಮಾನ್ಯ ಶಾಸಕ ಶ್ರೀ ಹೆಬ್ಬಾರರ ಮುಖಂಡತ್ವದಲ್ಲಿ ಜಿಲ್ಲೆಯ ಸಮಸ್ತ ಕನ್ನಡಿಗರ ಸಹಕಾರದಿಂದ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲದೆ ರಾಷ್ಟ್ರೀಯ ಸಾಹಿತ್ಯ ಸಮ್ಮೇಳನಗಳೂ ಇಂದು ನಡೆಯುವಂತಾಗಲೀ, ಆಗುತ್ತದೆ ಎಂಬ ನಂಬಿಕೆಯೊಡನೆ ಎಲ್ಲರನ್ನೂ ಮಾಸ್ತರನಾಗಿ ಹೃತ್ಪೂರ್ವಕವಾಗಿ ನಮಿಸುತ್ತಾ ಡಿವಿಜಿಯವರ ದಾರಿಹೋಕರು ಕವಿತೆಯ ಈ ಸಾಲು :

            ಇಂತೆಸಗ ಬೇಕೆಂಬ ಹಠದ ಬಂಧನವಿಲ್ಲ
            ಪಂಧವಿದು ಕಡಿದೆಂಬ ಭೀತಿಯಿಲ್ಲ
            ಅಂತರಂಗದೊಳು ನಾವಾಂತು ಗುರುಗಳ ಪದವ
            ಸಂತಸಿಪೆವವರನುಡಿಯಿಂ- ಸಖರೆ

            ಎನ್ನುತ್ತ ಭಾರವಾದ ಹೃದಯ ಭಾಗುತ್ತಿರುವ ಭಾವನೆಗಳೊಡನೆ ವೇದಿಕೆ ಹಂಚಿಕೊಂಡ ಹಿರಿಯರೊಡನೆ ಧನ್ಯತೆಯ ಮಧುರವಾದ ಘಳಿಗೆಗೆ ಸಾಕ್ಷಿಯಾದ ತಮ್ಮೆಲ್ಲರಿಗೆ ಶುಭಹಾರೈಸುತ್ತ ನೆನಪು ಅಮರವಾಗಲಿ. ತೇರನೆಳೆಯಲು ಬಂದು ಸೇವೆ ಸಲ್ಲಿರುವ ತಮಗೆ ಈ ವಿಚಾರ ಅರ್ಪಿಸುತ್ತಾ ಕ್ಲೇಶ ಫಲೇನ ಹಿ ಪುನರ್ದೆವತಾಂ ವಿಧತ್ತೆ, ಎಂದು ಕನ್ನಡಾಂಬೆಗೆ ಜೈ ಎನ್ನುತ್ತಾ ಕನ್ನಡಂ ಬಾಳ್ಗೆ, ಸಿರಿಗನ್ನಡಂ ಗೆಲ್ಗೆ ಎಂದು ವಿರಮಿಸುವ ಮುನ್ನ ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗದ ಕೊನೆಯ ಪದ್ಯದೊಡನೆ ;

            ಶರಣುವೊಗು ಜೀವನ ರಹಸ್ಯದಲಿ ಸತ್ವದಲಿ
            ಶರಣು ಜೀವನವ ಸಮನೆನಿಪಯತ್ನದಲಿ
            ಶರಣಂತರಾತ್ಮ ಗಂಭೀರ ಪ್ರಶಾಂತಿಯಲಿ
            ಶರಣು ವಿಶ್ವಾತ್ಮದಲಿ- ಮಂಕುತಿಮ್ಮ
ಕೊನೆಯಲ್ಲಿ ಎಲ್ಲಾ ತಪ್ಪುಗಳಿಗೆ ವಿಷ್ಣು ಸ್ಮರಣೆ ಪರಿಹಾರ ಎನ್ನುತ್ತಾ ತಪ್ಪುಗಳ ಕ್ಷಮಿಸಿ ಗುಣಗಳನ್ನು ಮನ್ನಿಸಿ ಎನ್ನುತ್ತಾ ವಿರಮಿಸುತ್ತೇನೆ.