Wednesday, July 26, 2017

ಮಾಯವಾದ ಅಬ್ಬಿ ನೀರು ಮತ್ತು ಜಲಮರುಪೂರಣ



ಪರಿಸರ ಸಂರಕ್ಷಣೆಯ ಬಗ್ಗೆ ಮಾತಾಡುವುದು ಸುಲಭ, ಆದರೆ ಅದರ ಬಿಸಿ ತಗಲುವುದು ಬರಗಾಲದಂತಹ ವಿದ್ಯಮಾನಗಳು ಜರುಗತೊಡಗಿದಾಗಲೇ.  ನೈಸರ್ಗಿಕ ಅರಣ್ಯದ ಮೇಲಿನ ಒತ್ತಡ ಹೆಚ್ಚುತ್ತಾ ಹೋದಂತೆಲ್ಲ ಪರಿಸ್ಥಿತಿ ಬಿಗಡಾಯಿಸುತ್ತದೆ ಎಂಬುದು ಅನುಭವಕ್ಕೆ ಬಂದ ವಿಷಯವೇ ಆದರೂ, ಈ ವರ್ಷದಷ್ಟು ಅನಾನುಕೂಲ ಯಾವತ್ತೂ ಆಗಿರಲಿಲ್ಲ.  ಮಲೆನಾಡಿನ ಕೆಲವು ಭಾಗಗಳಲ್ಲಿ ಕಂಡುಬರುವ ಅಬ್ಬಿ ನೀರು ಎಂಬ ವಿಸ್ಮಯ ಕಳೆದ ಮೂರು ವರ್ಷಗಳಿಂದ ನಿಧಾನವಾಗಿ ಕಡಿಮೆಯಾಗುತ್ತಾ ಬರುತ್ತಾ ಇದ್ದು , ಈ ವರ್ಷ ಮಾಯವಾದ  ಘಟನೆಗೆ ಮಳೆಯ ಕೊರತೆ ಮೂಲ ಕಾರಣ ಅನ್ನಿಸಿದರೂ ನಿಜವಾದ ಕಾರಣ ಬೇರೆಯೇ ಇತ್ತು. ತಲತಲಾಂತರಗಳಿಂದ ಹರಿದು ಬರುತ್ತಿರುವ ಜಲ  ಅದರ ಮೂಲದಲ್ಲಿಯೇ ಬತ್ತುತ್ತಿರುವುದು, ಮಲೆನಾಡಿಗರ ನಿದ್ದೆಗೆಡಿಸಿದ್ದಂತೂ ಹೌದಾಗಿತ್ತು. 

ಹೌದು. ತಾಯಿ ಭಾಗೀರಥಿಯೇ ಮುನಿದರೆ ಈ ಮನುಜ ಹೇಗೆ ಬದುಕಿಯಾನು ಅಲ್ಲವೇ? ತಾಯಿಯ ಮುನಿಸು ಕಡಿಮೆಯಾಗಲು ಮಕ್ಕಳು ಏನಾದರೂ ಉಪಾಯ ಮಾಡಬೇಕಲ್ಲ ! ಎಂದು ಮಲೆನಾಡಿನ ಸಾಗರ ತಾಲೂಕಿನ  ಹೊಸಳ್ಳಿ, ಹಂಸಗಾರು ಮತ್ತು ಗೋಟಗಾರು ಊರಗಳಲ್ಲಿನ ಕೆಲವು ಉತ್ಸಾಹೀ ಯುವಕರು ಎರಡು ತಿಂಗಳ ಹಿಂದೆ  ಚರ್ಚೆ ನಡೆಸಿದರು. ಚರ್ಚೆಯಲ್ಲಿ ನಿರ್ಧಾರವಾಗಿದ್ದು “ನಮ್ಮ ನೀರು ನಮ್ಮೆಲ್ಲರಿಗಿರಲಿ, ನೀರಿಂಗಿಸೋಣ “ ಎಂಬ  ಯೋಜನೆ.  ಜಿತೇಂದ್ರ ಹಿಂಡುಮನೆ ಮತ್ತು ಅರುಣ್ ಹೆಗಡೆ ಗೊಟಗಾರು ಇವರ ಮುಂದಾಳತ್ವದಲಿ ಪ್ರಾರಂಭವಾದ ನೀರಿಂಗಿಸುವ ಕಾರ್ಯ, ಸುತ್ತಮುತ್ತಲಿನ ಊರುಗಳಲ್ಲಿ ಕುತೂಹಲವನ್ನು ಹುಟ್ಟಿಸಿತು. ಪ್ರಾರಂಭದಲ್ಲಿ 25,000 /- ರೂಪಾಯಿಗಳಿಂದ ಯೋಜನೆ ಆರಂಭವಾಯಿತು.  ಮುಂದುವರಿದಂತೆ ಊರವರೆಲ್ಲರೂ ನಿಧಾನವಾಗಿ ಕೈ ಜೋಡಿಸಿ, ಹಣಸಹಾಯವನ್ನೂ ಮಾಡಿದ್ದರಿಂದ ಕೆಲಸ ವೇಗವಾಗಿ ಸಾಗತೊಡಗಿತು.

ಓಡುವ ನೀರನ್ನು ನಡೆಯುವಂತೆ , ನಡೆಯುವ ನೀರನ್ನು ನಿಲ್ಲುವಂತೆ , ನಿಂತ ನೀರನ್ನು  ಹಿಡಿಯುವಂತೆ ವ್ಯವಸ್ಥೆ ಮಾಡಬೇಕು ಎಂಬುದು ಜಲತಜ್ಞರೆಲ್ಲರೂ ಹೇಳುವ ಮಾತು. ಇಲ್ಲಿ ಅದನ್ನು ಪಾಲಿಸಲಾಗಿದೆ. ಎತ್ತರದ ಗುಡ್ಡಗಳಿಂದ ಓಡೋಡಿ ಬರುವ ನೀರು  ಅಲ್ಲಲ್ಲಿ ನಿಧಾನವಾಗುವಂತೆ ಇಂಗುಗುಂಡಿಗಳನ್ನು ತೋಡುವ ಯೋಜನೆ ರೂಪಿಸಿದ್ದಾರೆ. ನೀರಿನ ಓಟಕ್ಕೆ ತಡೆಯಾಗುವಂತೆ ಚಿಕ್ಕಚಿಕ್ಕ ಇಂಗುಗುಂಡಿಗಳ ನಿರ್ಮಾಣವೂ ಬಹಳ ಕಡೆ ನಡೆದಿದೆ. ಎರಡರಿಂದ ಮೂರು ಲಕ್ಷ ಲೀಟರ್ ನೀರಿಂಗಬಹುದಾದ ೧೬ ದೊಡ್ಡ ಗುಂಡಿಗಳು ಮತ್ತು ಸುಮಾರು ಇನ್ನೂರರಿಂದ ಮುನ್ನೂರು ಲೀಟರ್ ನೀರಿಂಗಬಹುದಾದ ಹಲವಾರು ಚಿಕ್ಕ ಇಂಗುಗುಂಡಿಗಳನ್ನು ಈ ವರ್ಷದ ಲೆಕ್ಕದಲ್ಲಿ ಮಾಡಿ ಮುಗಿಸಿದ್ದಾರೆ.  ಅದಲ್ಲದೇ ಗೊಟಗಾರು ಗ್ರಾಮದ ಕೆರೆಕೋಡಿ ಕೆಲಸವನ್ನೂ ಮಾಡಿದ್ದಾರೆ.

ಇಷ್ಟೇ ಆಗಿದ್ದರೆ ಬಿಡು ಯಂತ್ರಗಳ ಮೂಲಕ ಕೆಲಸ ಮಾಡಿದ್ದಾರೆ ಅನ್ನಬಹುದಿತ್ತು. ಆದರೆ ಇದಕ್ಕಿಂತ ದೊಡ್ಡ ಇನ್ನೊಂದು  ಕೆಲಸವನ್ನೂ ಈ ಗ್ರಾಮಗಳ ಯುವಕರು ಮಾಡಿದ್ದಾರೆ. ನೇರಲು, ಹಲಸು, ಮಾವು, ನೆಲ್ಲಿ, ಹೊನ್ನೆ, ಹೆಬ್ಬೇವಿನ  ಒಂದು ಸಾವಿರ ಸಸಿಗಳನ್ನು ಗುಡ್ಡದ ಮೇಲಕ್ಕೆ  ಸುಮಾರು ಎರಡರಿಂದ ನಾಲ್ಕು  ಕಿಲೋಮೀಟರ್ ದೂರದ ತನಕವೂ ಹೊತ್ತೊಯ್ದು , ಅಲ್ಲಲ್ಲಿ ಸೂಕ್ತ ಜಾಗಗಳಲ್ಲಿ ನೆಟ್ಟಿದ್ದಾರೆ. ಸಾಧಾರಣವಾಗಿ ನಡೆದು ಹೋಗುವುದೇ 

ಕಷ್ಟದಾಯಕ ಎನಿಸುವ ಜಾಗದಲ್ಲಿ, ಪ್ರಾರಂಭದ ಮಳೆಯ ನಡುವೆಯೂ,  ಗಿಡಗಳನ್ನು ಹೊತ್ತೊಯ್ದ ಪರಿಶ್ರಮ ಶ್ಲಾಘನಾರ್ಹ. ಹೊಸಳ್ಳಿ, ಹಂಸಗಾರು, ಗೋಟಗಾರು, ಗುರ್ಲಮಂಜಿ ಊರುಗಳ ಹಿಂದಿನ ಗುಡ್ಡಗಳಲ್ಲಿ ನಡೆದ ಈ ಎಲ್ಲ  ಕೆಲಸಗಳು ನಿಧಾನವಾಗಿ ಸುತ್ತಮುತ್ತಲ ಗ್ರಾಮಗಳಿಗೂ ಸ್ಪೂರ್ತಿದಾಯಕ ಆಗುತ್ತಿದೆ.            




ಹೊಸಳ್ಳಿ, ಗೋಟಗಾರು, ಮರಹಾನ್ಕುಳಿ, ಮರಡುಮನೆ ಮತ್ತು  ಅರೆಹದ್ದ ಊರಿನವರಾದ,  ಜಿತೇಂದ್ರ,  ಅರುಣ,  ಶೇಡಿ ಲಕ್ಷ್ಮಿನಾರಾಯಣ, ವಿಶ್ವೇಶ್ವರ ಗಾಲಿ, ಕಲ್ಸೆ ತಿಮ್ಮಪ್ಪ, ಹಿಂಡೂ ಪ್ರಭಾಕರ,  ಹಿಂಡೂ ತಿಮ್ಮಪ್ಪ,  ಮಹೇಶ, ಹರೀಶ,  ಕಷ್ಣ, ಅಟ್ಟೆ ಶ್ರೀಕಾಂತ ಮುಂತಾದವರ ಆಸಕ್ತಿ, ಉತ್ಸಾಹದಿಂದ  ನಿರೀಕ್ಷೆಗೂ ಮೀರಿ ಸಫಲವಾದ ಈ ಕೆಲಸಕ್ಕೆ ಯಾವುದೇ ಉದ್ಘಾಟನೆ, ಸಭೆ ಸಮಾರಂಭಗಳಿರಲಿಲ್ಲ.   ಕೇವಲ ಕೆಲಸಕ್ಕೆ ಆದ್ಯತೆ ನೀಡಿ ನಡೆಸಲಾದ ಈ ಕಾರ್ಯಕ್ಕೆ ಒತ್ತಾಯದ ವಸೂಲಿಯೂ  ಇರಲಿಲ್ಲ.  ಜನರು  ಸ್ವಯಂ ಪ್ರೇರಿತವಾಗಿ ಬಂದು  ಸೇರ್ಪಡೆಯಾಗಿ,  ನಿರೀಕ್ಷೆಗೂ ಮೀರಿ ಬೆಂಬಲ ನೀಡುವುದರ ಜೊತೆಗೆ  ಧನಸಂಗ್ರಹವೂ ಆಗಿದ್ದರಿಂದ ನಮ್ಮ ಉತ್ಸಾಹ ಹೆಚ್ಚಾಯಿತು ಎನ್ನುತ್ತಾರೆ ಈ ಕೆಲಸ ಪ್ರಾರಂಭಿಸಿದ ಗೊಟಗಾರು ಅರುಣ ಹೆಗಡೆ ಮತ್ತು ಜಿತೇಂದ್ರ.
“ಇಲ್ಲಿಯವರೆಗೆ ಎರಡು ಲಕ್ಷ ರೂಪಾಯಿಗಳು ಖರ್ಚಾಗಿವೆ, ಹೆಚ್ಚಿನ ಪಾಲು ಜೇಸಿಬಿ ಯಂತ್ರದ ಬಾಡಿಗೆಗಾಗಿ ಖರ್ಚಾಗಿದೆ. ಬಹಳಷ್ಟು ಸಸಿಗಳನ್ನು ಅರಣ್ಯ ಇಲಾಖೆಯವರು ನೀಡಿದ್ದಾರೆ. ಸ್ವಲ್ಪ ಸಸಿಗಳು ಇಲ್ಲೇ ತಯಾರಿಸಿದ್ದು.  ನಮಗೆ ಬೇರಾವ ಕೆಲಸವೂ ಕಷ್ಟವಾಗಲಿಲ್ಲ, ಆದರೆ ನಾಲ್ಕೈದು ಕೇಜಿ ತೂಗುವ ಸಸಿಗಳನ್ನು ಗುಡ್ಡಕ್ಕೆ ಸಾಗಿಸುವುದು ಮಾತ್ರ ಬಹಳ ಕಷ್ಟ ಎನಿಸಿತು. ಆದರೂ ಪಟ್ಟು ಬಿಡದೆ ಕೆಲಸ ಮುಗಿಸಿದ ಮೇಲೆ, ನಮ್ಮ ಶ್ರಮ ಸಾರ್ಥಕವಾಯಿತು ಎನಿಸುತ್ತಿದೆ,  ನಮ್ಮ ಈ 


ಹುಚ್ಚು ಹವ್ಯಾಸಕ್ಕೆ ಏನನ್ನುತ್ತಾರೋ ಎಂಬ ಅಳುಕಿನಿಂದಲೇ ಕೆಲಸ ಪ್ರಾರಂಭಿಸಿದ ನಮಗೆ ಈಗ ಧೈರ್ಯ ಬಂದಿದೆ. ತಮ್ಮ ಕೈ ಮೀರಿ ಸಹಾಯ ಮಾಡಿರುವ ಗ್ರಾಮಸ್ಥರಿಗೆ ಮತ್ತು ಸ್ನೇಹಿತರಿಗೆ ಧನ್ಯವಾದಗಳು. ನೀರಿಲ್ಲದೆ ಏನಿದ್ದರೇನು ? ನೀರಿದ್ದೂ ನೀರಿಂಗಿಸದಿದ್ದರೇನು ? ನೀರನ್ನು ಮಿತವಾಗಿ ಬಳಸೋಣ, ಅಂರ್ತಜಲದ ಮಟ್ಟವನ್ನು ಹೆಚ್ಚಿಸೋಣ....ಬನ್ನಿ ಪಾಲ್ಗೊಳ್ಳಿ”  ಎನ್ನುವಾಗ ಅವರ ಸಂತಸ ಮಾತಿನಲ್ಲಿ ಪ್ರತಿಫಲಿಸುತ್ತಿತ್ತು.
ಮಲೆನಾಡಿನಲ್ಲೇ  ನೀರಿಗಾಗಿ ಹಾಹಾಕಾರ ಎದ್ದಿರುವ ಇಂದಿನ ಪರಿಸ್ಥಿತಿಯಲ್ಲಿ, ಎಲೆಮರೆಯ ಕಾಯಿಯಂತೆ ನಡೆಯುತ್ತಿರುವ  ಇಂತಹ ಕೆಲಸಗಳು ಹೆಚ್ಚುಹೆಚ್ಚು ಬೆಳಕಿಗೆ ಬರಬೇಕಾಗಿದೆ. ಆ ಮೂಲಕ ಹೆಚ್ಚುಹೆಚ್ಚು ಜನರು ಸ್ಫೂರ್ತಿ ಪಡೆದು, ತಾವೂ ನೀರಿಂಗಿಸುವ ಕಾರ್ಯ ಪ್ರಾರಂಭ ಮಾಡಿದರೆ, ಜಲ, ಜನ ಎರಡೂ ಸಮೃದ್ದಿಯಾಗುವುದರಲ್ಲಿ ಸಂಶಯವಿಲ್ಲ.
-
Hosadigantha ePaper -

No comments:

Post a Comment