Friday, September 23, 2016

ಸದ್ಗುರು ಶ್ರೀಧರ ವಿರಚಿತ ಅಭಯದಾನ ಶ್ಲೋಕದ ಷಟ್ಪದಿ ರೂಪಾಂತರಣ :

ಸದ್ಗುರು ಶ್ರೀಧರ ವಿರಚಿತ ಅಭಯದಾನ ಶ್ಲೋಕದ ಷಟ್ಪದಿ ರೂಪಾಂತರಣ :
------------------------------------------------------------------------------
ಸದ್ಗುರು ಭಗವಾನರು ಸನ್ಯಾಸಗ್ರಹಣ ಸಮಯದಲ್ಲಿ ರಚಿಸಿದ ಹದಿಮೂರು ಅಭಯದಾನ ಶ್ಲೋಕಗಳು ಗುರುಮಹಿಮೆ, ಗುರುಕಾರುಣ್ಯ, ಗುರುವಿನ ಅಗಾಧತೆ ಇತ್ಯಾದಿಗಳಿಗೆ ದ್ಯೋತಕವಾಗಿವೆ. #ಶ್ರೀಧರಭಾಮಿನಿಧಾರೆ ಬರೆಯುವ ಸಂದರ್ಭದಲ್ಲಿ ಇದನ್ನು ಓದಿಯೂ ನನಗೆ ಇವುಗಳ ಮೇಲೆ ಷಟ್ಪದಿ ಬರೆಯಲಾಗಿರಲಿಲ್ಲ. ಆದರೆ ಇಂದು ಬೆಳಗಿನಿಂದ,(30.08.2016) ಬರೆಯೋಣ ಅನ್ನಿಸಿ, ಗುರುಕರುಣೆಯೊಂದಿಗೆ ಬರೆಯಲು ಸಾಧ್ಯವಾಯಿತು. ತಾತ್ಪರ್ಯ ಬರೆದು ಇದನ್ನು ಧಾರೆಯೊಂದಿಗೆ ಸೇರಿಸುತ್ತೇನಾದರೂ, ಬೇರೆಯದೇ ಒಂದು ಗುಚ್ಛ ಮಾಡಿ ನಿಮ್ಮೆದುರು ಇಡೋಣ ಎನ್ನಿಸಿದ್ದರಿಂದ , ಇಲ್ಲಿ ಕೊಡುತ್ತಿದ್ದೇನೆ. ಚಿತ್ರಗಳಲ್ಲಿ ಮೂಲ ಕೊಟ್ಟಿದ್ದೇನೆ.
ಸದ್ಗುರು ಭಗವಾನ್ ಶ್ರೀ ಶ್ರೀಧರ ಸ್ವಾಮಿಗಳಿಗೆ ಜಯವಾಗಲಿ.
-----------------------------------------------------------------------------



೧)
ಅಭಯನೀಡುತಲಲ್ಲಿ ಗುರುವರ
ಅಭಯದಾನವ ಮಾಡಿಹರು ಆ
ಅಭಯರೂಪಿಗೆ ಮನದಿವಂದಿಪೆ ರಕ್ಷಿಸನವರತಾ ||
ವಿಭವಹೊಂದಿದ ಕರುಣವಾರಿಧಿ
ಅಭಯ ಆನಂದಾದಿರೂಪದ
ವಿಭುವ ಬೊಮ್ಮನೆ ನಾನು ಎನ್ನುತ ಮಾಯೆ ತೊಡೆದಿಹರೂ ||


ಅತಿಯಸುಖವನುಪಡೆಯಲೋಸುಗ
ಮತಿಗೆಬೇಕದು ವಿದ್ಯೆ ದೇವತೆ
ಜೊತೆಗೆ ಬೇಕೂ ಬ್ರಹ್ಮನೊಲುಮೆಯು ಗುರುವೆಬೊಮ್ಮನವಾ ||
ಹಿತವ ಮಾಡುವನವನು ಗುರುವರ
ಮತಿಗೆ ಕೊಡುವನು ಬೊಮ್ಮ ವಿದ್ಯೆಯ
ಮತಿಯ ನೀಡುತ ಗುರುವ ಬೇಡಿರಿ ಅಭಯ ಹೊಂದುವಿರೀ ||

೩)


ನಿತ್ಯವೂ ಮೋಕ್ಷವನು ಧರಿಸಿಹ
ಸತ್ಯರೂಪಿಯು ಬೊಮ್ಮನವನೂ
ಮಿಥ್ಯೆನಾಶಕೆ ಸಿರಿಧರಾರ್ಯರ ಹೊಕ್ಕಿ ನೀವೆಲ್ಲಾ ||
ವಿತ್ತವದುಶಾಶ್ವತವು ಅಲ್ಲವೊ
ಮೃತ್ಯುಇರುವನು ಬೆನ್ನ ಹಿಂದೆಯೆ
ಎತ್ತನೋಡಿದರತ್ತಕಾವಳ ಗುರುವು ಇಲ್ಲದಿರೇ ||




೪)
ಯಾವುದನು ಸನಕಾದಿಮುನಿಗಳು
ಯಾವುದನುಮುನಿ ಶುಕನು ಪಡೆದನೊ
ಯಾವುದನು ದೇವಾದಿದೇವರು ಪಡೆಯ ಬಯಸಿದರೋ ||
ಆ ವಿಶೇಷಕೆ ಬೊಮ್ಮನೆನುವರು
ಆ ವಿಶೇಷವೆ ಸಿರಿಧರಾರ್ಯರು
ಆ ವಿಶೇಷದ ಗುರುಗೆ ವಂದಿಸಿ ಮೋಕ್ಷ ಪಡೆಯುವಿರೀ ||

೫)


ಶ್ರುತಿಯು ಓಂಕಾರವನು ಬಗೆಯಲಿ
ಅತಿಯ ವಿಧದಲಿ ಭಾಗ ಮಾಡಿತು
ಅತಿಯ ಕೊನೆಯಾ ರೂಪವದುವೇ ಬೊಮ್ಮ ಎಂದಿಹುದೂ ||
ಯತಿಗಳಲಿಅತಿ ಉತ್ತಮೋತ್ತಮ
ಜೊತೆಗೆ ಕರುಣಾ ಮೂರ್ತಿ ಸಿರಿಧರ
ಅತಿವಿಶೇಷದ ಬೊಮ್ಮರೂಪವು ತಾನೆ ಆಗಿಹರೂ ||

೬)
ಲಿಂಗ ಬೇಧ ವು ಇಲ್ಲದಿರುವಾ
ಅಂಗ ದೇಹದ ಪರಿವೆ ಇರದಿಹ
ರಂಗ ರೂಪಿಯು ಅದುವೆ ಬೊಮ್ಮನು ಗುರುಗಳಾಗಿಹರೂ ||
ಮಂಗಳದ ಆ ದಿವ್ಯ ರೂಪದಿ
ತಂಗಿರುವ ಗುರು ಸಿರಿಧರಾರ್ಯಗೆ
ಮಂಗಳಾಕಾಂಕ್ಷಿಗಳು ಬಾಗಿರಿ ನಮಿಸಿರನವರತಾ ||




೭)

ಯಾವವಿಷಯವ ತಿಳಿಯೆ ಶೋಕವು
ಧಾವಿಸುವುದೋ ಮನದ ಹೊರಗಡೆ
ಆವಿಶೇಷಕೆ ಶ್ರುತಿಯು ಹೇಳಿತು ನೀನೆಬೊಮ್ಮನಿಹೇ ||
ಯಾವುದದು ಸರ್ವಕ್ಕು ಹೆಚ್ಚೆಂ-
ಬಾವಿಶೇಷಕೆ ಶಾಂತ ನಿರ್ಗುಣ
ದಾವಿಶೇಷದ ಬೊಮ್ಮನೆಂದಿಹರವರೆಗುರುವರರೂ ||

೮)
ಎರಡನೆಯದಿಲ್ಲದೆಲೆ ಇರುವಾ
ಸರುವತತ್ವಕೆ ಮೀರಿ ನಿಂತಿಹ
ಹಿರಿಯರೂಪಕೆ ಹಿರಿಯರಾನುಡಿ ನೀನೆ ಬೊಮ್ಮನಿಹೇ ||
ಗುರುವರರು ಆ ಬ್ರಹ್ಮ ತತ್ವದಿ
ವಿರಮಿಸುತಲದು ನುಡಿದ ಅಭಯವು
ಮೊರೆಯ ಹೊಕ್ಕಿಹ ಜನರ ಒಳಿತಿಗೆ ಒಳಿತು ನೀತಿಳಿಯೋ ||

೯)
ಜ್ಞಾನವಿಲ್ಲದೆ ವಿಷಯ ವಾಸನೆ
ಯನ್ನು ಬಿಡದಲೆ ಆಪ ದುಃಖವು
ನಾನುಹೋದರೆ ಬೊಮ್ಮನಾಗುವೆ ಎಂಬ ಸಂಗತಿಯೂ ||
ಜ್ಞಾನಿಗದುತಿಳಿಯುವುದು ಆಗಲೆ
ನಾನುಕಳೆಯುತ ಗುರುಗೆ ಬಾಗಲು
ನೀನೆ ಪೊರೆಯಲು ಬೇಕು ಎನ್ನುತ ಶರಣು ಹೊಕ್ಕಿರಲೂ ||



೧೦)
ಸಕಲ ಜೀವಕು ಬೇದ ತೋರದ
ಸಕಲ ದೇವಗು ಮೀರಿ ನಿಂತಿಹ
ಸಕಲ ತತ್ವದ ಸಾರವಾಗಿಹ ತತ್ವರಾಜವದೂ ||
ಚಕಿತಗೊಳಿಸುವುದದರ ಹಿರಿಮೆಯ
ಲಖಿಲ ಜಗಕೇ ದಾರಿ ತೋರುತ
ಸಕಲ ಜನರೂ ಬಾಗಿರೀಆ ತತ್ವ ರಾಜನಿಗೇ ||

೧೧)

ಭಿನ್ನತೆಯ ಕಾರಣದಿ ಭೀತಿಯು
ಮಾನವಗೆ ಆಗುವುದು ಸಹಜವು
ನಾನೆ ಬೊಮ್ಮನು ಎಂದು ತಿಳಿದಾ ಜ್ಞಾನಿಗಾಗದದೂ ||
ನಾನೆ ಬೊಮ್ಮವು ನಾನೆ ಅಭಯವು
ನಾನೆ ಆನಂದಾದಿ ರೂಪವು
ಎನ್ನುತಲಿ ನುಡಿದಿರುವ ಗುರುವಿಗೆ ಶರಣು ಬಂದಿಹೆನೂ ||

೧೨)
ಆದಿ ಯಾವುದೊ ಅದುವು ನೀನೇ
ಹಾದಿ ಯಾವುದೊ ಅದುವು ನೀನೇ
ಸಾಧಕನ ಉದ್ದರಿಪ ಶಕ್ತಿಯು ನೀನೆ ಗುರುವರನೇ ||
ಸಾಧನೆಯ ಹಾದಿಯಲಿ ಬರುವಾ
ಬಾಧೆ ಕಳೆವವ ನೀನೆ ಸಿರಿಧರ
ಬೋಧಿಸೆನಗೇ ಅಭಯ ರೂಪದಿ ಅಭಯದಾನಂದಾ ||

೧೩)
ಅರಿವು ಮರೆವನು ಬಿಟ್ಟು ನಿಶ್ಚಲ
ತರದಿಇರುವವ ನವನು ಬೊಮ್ಮನು
ನಿರತಿಶಯದಾ ಸುಖವ ಕೊಡುವನು ಅವನೆ ಗುರುವರನೂ ||
ಎರಡು ಇಲ್ಲದ ಏಕವಾಗಿಹ
ಗುರುವಿನಾರೂಪವನು ಪೊಗಳಲು
ಅರಿಯೆನೆಂದಿತು ತಾಯಿ ವಾಣಿಯು ಅವನೆ ಗುರುವರನೂ ||


-----------------------------------------------------------------------------
-----------------------------------------------------------------------------
kallareguru.blogspot.com

ಒಲಿದಂತೆ ಹಾಡುವೆ

*******-------*******-------********  


ಒಲಿದಂತೆ ಹಾಡುವೆ, ಹೊಳೆದಂತೆ ಬರೆಯುವೆ,
ಅನೃತವಾಡುವ ಬಯಕೆ ಎಂದೂ ನನಗಿಲ್ಲ.
ಶಾರದೆಯ ಒಲುಮೆಯದು ದೊರತರದು ಸಾಕಲ್ಲ,
ಕಾವ್ಯ ಕನ್ನಿಕೆಯು ಸನಿಹ ಬರುವಳಲ್ಲ..!!


ದಾರಿಕಾಣದೆ ಮುಂದೆ ತಡವರಿಸುವಾಗೆಲ್ಲ,
ಚಿಂತೆ ಏತಕೆ ನನಗೆ ಗುರುಗಳಿಹರಲ್ಲ..
ಅವರ ಒಲುಮೆಯ ಮುಂದೆ, ಚಿಂತೆ ಬಿಡುವರು ಎಲ್ಲ,
ಎಲ್ಲರಂತೆಯೆ ನಾನು... ಗುಂಪಿನೊಳಗಲ್ಲ.


ಬಯಕೆ ನನ್ನದು ಇಹುದು ಬರೆಯುವಾ ಆಸೆಯದು, ಪರಮಗುರುವಿನ ಚರಿತೆ, ಕಾವ್ಯ ರೂಪದಲಿ,
ಒಲಿದರೆ  ಶಾರದೆಯು, ಕರುಣದೀ ಶ್ರೀಧರರು,
ಹನುಮದ್ವಿಕಾಸಕ್ಕೆ ಎಲ್ಲೆ ಎಲ್ಲಿ.......!!

*******-------*******-------********

Monday, September 19, 2016

ಮಗಳಿಗೆ ಜ್ವರ

ಮಗಳೇ.........
ನಿನಗೆ ಜ್ವರ ಬಂದು ಇವತ್ತಿಗೆ ಸರಿಯಾಗಿ ಎಂಟು ದಿನ ಆಯ್ತು...!!

ಈ ಎಂಟು ದಿನದಲ್ಲಿ ನಾವು ನೆಮ್ಮದಿಯಿಂದ ನಿದ್ದೆ ಮಾಡಿದ್ದು ನಿನ್ನೆ ರಾತ್ರಿ ಮಾತ್ರ ಮಗಳೇ..!

ಬೇರೆ ಏನೂ ಕೆಲಸ ಮಾಡೋದಿಕ್ಕೇ ಸಾಧ್ಯ ಆಗದೇ , ಕೇವಲ ನಿನ್ನ ಆರೈಕೆಯೊಂದೇ ನಮ್ಮ ಏಕಮಾತ್ರ ಗುರಿ ಆಗಿಬಿಟ್ಟಿದೆ.

ಕಳೆದ ಸೋಮವಾರ ಹಿಂದೂ ಮಹಾಸಭಾ ಗಣಪತಿ ಬಿಡುವ ಮೆರವಣಿಗೆ ತೋರಿಸಲು ನಿನ್ನ ಕರೆದುಕೊಂಡು ಹೋದಾಗ , ಆ ಪಟಾಕಿ ಹೊಡೆದ ಶಬ್ದಕ್ಕೆ ಬೆಚ್ಚಿಬಿದ್ದು ನನ್ನ ಕುತ್ತಿಗೆಯ ಸುತ್ತ ಗಟ್ಟಿಯಾಗಿ ತಬ್ಬಿ ಹಿಡಿದಿದ್ದೆ ನೀನು. ತಕ್ಷಣ ವಾಪಾಸು ಕರೆದು ಕೊಂಡು ಬಂದೆ. ಆಗಲೇ ಸಣ್ಣದಾಗಿ ನಿನಗೆ ಜ್ವರ ಇತ್ತು. ನಂತರ ಸತತ ಎರಡು ದಿನ ಮಳೆ ಬಂತಲ್ಲ, ಬಹುಶಃ ವಾತಾವರಣದ ವ್ಯತ್ಯಾಸದಿಂದ ಜ್ವರ ಬಂತು ಅಂತ ಯೋಚಿಸಿದ ನಾವು , ನಿನ್ನನ್ನ ವೈದ್ಯ ಡಾಕ್ಟರ್ ಹತ್ರ ಕರೆದುಕೊಂಡು ಹೋಗಿದ್ದೆವು.
ನಮ್ಮ ಲೆಕ್ಕದಲ್ಲಿ ಬೇಗನೇ ಹೋಗಿದ್ದರೂ, ನಮಗೆ ಸಿಕ್ಕ ಟೋಕನ್ ಮಾತ್ರ ಇಪ್ಪತ್ತೆರಡನೆಯದು. ಸುಮಾರು ಒಂದೂವರೆ ಗಂಟೆಗಳ ಕಾಲ, ನಡುನಡುವೆ ಗಲಾಟೆ ಮಾಡುತ್ತಿದ್ದ ನಿನ್ನನ್ನು ಸಮಾಧಾನ ಪಡಿಸುತ್ತಾ, ಎತ್ತಿಕೊಂಡು ಹೊರಗಡೆ ಸುತ್ತಾಡಿಸುತ್ತಾ,  ನಾವಲ್ಲೇ ಕುಳಿತು, ಡಾಕ್ಟರ್ ಸಿಕ್ಕಿದ ನಂತರ ನಿನ್ನನ್ನು ಅವರಿಗೆ ತೋರಿಸಿ, ಈಗಾಗಲೇ ಹಾಕುತ್ತಿರುವ ಔಷಧಿಯನ್ನೇ ಮುಂದುವರೆಸಿ ಅಂತ ಅವರು ಹೇಳಿದ ಮೇಲೆ ವಾಪಸ್ಸು ಬಂದಿದ್ದೆವು.

ಆದರೆ ಜ್ವರ ಗುಣವಾಗಿರಲಿಲ್ಲ.

ನಡುವೆ ನಿನ್ನ ಎರಡು ಜನ ಅಜ್ಜಿಯರನ್ನೂ ಅವರವರ ಮನೆಗೆ ಬಿಟ್ಟು ಬರಲು ಹೋಗಬೇಕಾಯ್ತು.ನಾವು ಹೋಗುವಾಗ ನೀನು ಅಳುತ್ತಿದ್ದೆ. ಆ ಅಳುವಿನ ಶಬ್ದ ಇನ್ನೂ ಕಿವಿಯಲ್ಲಿದೆ. ಒಂದು ವಾರದಿಂದ ತುಂಬಿದ ಮನೆಯಲ್ಲಿದ್ದ ನಿನಗೆ ಏಕಾಏಕಿ ಎಲ್ಲರೂ ಹೊರಟು ಹೋಗಿದ್ದು ತಡೆಯಲಾಗಲಿಲ್ಲ ಅಂತ ಗೊತ್ತಾದ್ರೂ , ... ಏನೂ ಮಾಡೋ ಹಾಗಿರಲಿಲ್ಲ.

ಸಾಗರ ಹೋದ ತಕ್ಷಣ  ತಡೆಯಲಾಗದೇ ಫೋನ್ ಮಾಡಿದರೆ ಕೇಳಿದ್ದು ಮತ್ತೆ ನಿನ್ನ ಅಳುವೇ...!!

ಮರುದಿನ ಬೆಳಿಗ್ಗೆ ಎದ್ದು ಫೋನ್ ಮಾಡಿದ್ರೆ , ನಿನಗೆ ವಾಂತಿ-ಭೇದಿ ಶುರುವಾಗಿದೆ ಎಂಬ ಸುದ್ದಿ ಬಂತು. ಪೂರ್ವನಿಗಧಿತ ಕೆಲಸ ಕಾರ್ಯಗಳನ್ನು ಅರ್ದಂಬರ್ಧ ಮಾಡಿ, ಉಳಿದ  ಕೆಲಸಗಳನ್ನು ಅರ್ಧದಲ್ಲಿಯೇ ಬಿಟ್ಟು ಮತ್ತೆ ಓಡಿಬಂದೆ. ಅದಾಗಲೇ ನೀನು ಪೂರ್ತಿ ಸುಸ್ತಾಗಿದ್ದೆ ಮಗಾ. ಮಲಗಿದವಳು ನಾನು ಬಂದಿದ್ದು ತಿಳಿದು, ಅಲ್ಲೇ ತಿರುಗಿ ನೋಡಿದೆಯಲ್ಲ...... ಆಗಲೇ ಗೊತ್ತಾಯಿತು.. ನಿನಗೆ ಮೇಲೇಳಲೂ ಶಕ್ತಿ ಇಲ್ಲ ಅಂತ.  ನಿನ್ನ ನೋಡಿ ಕಣ್ಣಂಚಲ್ಲಿ ಎರಡು ಹನಿಗಳು ಉದುರಿದ್ದು ನಿನ್ನ ಅಮ್ಮನಿಗೆ ಗೊತ್ತಾಗದಂತೆ ಒರೆಸಿಕೊಂಡೆ. ನನಗಿಂತ ಹೆಚ್ಚು ಗಾಬರಿಯಾಗಿದ್ದು, ಬೇಸರದಿಂದ ಇದ್ದಿದ್ದು ನಿನ್ನ ಅಮ್ಮ ಮಗಳೇ..!

ಸತತ ಮೂರುದಿನದಿಂದ ರಾತ್ರಿಯಿಡೀ ನಿದ್ದೆ ಇಲ್ಲದೇ , ಪದೇ ಪದೇ ನೀನು ಎದ್ದಾಗಲೆಲ್ಲ ಎದ್ದು ಹೈರಾಣಾದವಳು ಅವಳು. ಅಪ್ಪಂದಿರಿಗೆ ಎಷ್ಟೇ ಪ್ರೀತಿ ಇದ್ದರೂ ರಾತ್ರಿಯೆಲ್ಲ ಎದ್ದಿರುವುದು ಅಪರೂಪ. ಆದರೆ ನನಗೆ ಈ ಮೂರ್ನಾಲ್ಕು ದಿನಗಳಲ್ಲಿ ರಾತ್ರಿ ನಿದ್ದೆ ಬರಲಿಲ್ಲ. ನಿನ್ನ ಅಮ್ಮನಿಗೆ ಕೈಸೋತು ಬಂದಾಕ್ಷಣ , ನಿನ್ನನ್ನು ಹೆಗಲಮೇಲೆ ಹೊತ್ತು, ಬೆನ್ನು ತಟ್ಟುತ್ತಾ ಸಮಾಧಾನ ಮಾಡುತ್ತಿರುವಾಗ ಅನ್ನಸಿತು ಮಗಾ, ಎಲ್ಲಿದ್ದೆ ನೀನು? ಎಲ್ಲಿಂದ ಬಂದೆ? ಅಷ್ಟು  ಆನಂದ ಕೊಟ್ಟು ಈಗ ಜೀವ  ಚಡಪಡಿಸುವಂತೆ ಮಾಡುತ್ತಿದ್ದೀಯಾ? ಮಗಳೆ ನೀನು ಅಂದ್ರೆ ನಂಗೆ ತುಂಬಾ ಪ್ರೀತಿ......!!!

ವಾಂತಿಯೇನೋ ಒಂದು ದಿನ ಕಳೆದ ತಕ್ಷಣ ನಿಂತಿತು, ಆದರೆ ಭೇದಿ..? ಸತತ ಮೂರುದಿನ ಹೊಟ್ಟೆ ಕಾಲಿಯಾದರೆ ದೇಹದಲ್ಲಿ ಶಕ್ತಿತಾನೇ ಹೇಗೆ ಇರುತ್ತೆ.?
ವೈದ್ಯ ಡಾಕ್ಟರ್ ಆಸ್ಪತ್ರೆ ಎದುರು, ಅಳುತ್ತಿದ್ದ ನಿನ್ನನ್ನು ಎತ್ತಿಕೊಂಡು ಹೊರಗೆ ಬಂದು , ತೆಂಗಿನ ಮರದ ಮೇಲೆ ಕೂತ ಕಾಗೆ ತೋರಿಸಿದೆ. ತಲೆ ಎತ್ತಿ ಮೇಲೆ ನೋಡಿದ ನಿನ್ನ ತಲೆ ಹಾಗೇ ಹಿಂದಕ್ಕೆ ವಾಲಿತು.. ಅಷ್ಟು ಸುಸ್ತಾಗಿದ್ದೆ ನೀನು ಮಗಳೇ...!!

ಜೊತೆಗೆ ನಮ್ಮ ಸಮಸ್ಯೆ ಅಂದರೆ ನೀನು ಏನೇನೂ ತಿನ್ನದೇ ಇರುವುದು. ಹೌದು ಮಗಳೇ....ನೀನು ಏನನ್ನೂ ತಿಂದು ಅಥವಾ ಕುಡಿದು ಮಾಡುತ್ತಿರಲಿಲ್ಲ. ಕೊನೆಗೆ ORS ಕೂಡಾ ಕುಡಿಯದೇ, ಬಲವಂತದಿಂದ ಕುಡಿಸಿದರೆ ವಾಂತಿ ಮಾಡುತ್ತಿದ್ದೆ ನೀನು. ಇನ್ನು ಔಷಧಿ ಕುಡಿಸುವುದು ಹೇಗೆ??
ಬಲವಂತದಿಂದ ಕೈಕಾಲು ಹಿಡಿದು ಕುಡಿಸುವಾಗ ನೀನು   ' ಅಜ್ಜೀ.......... ' ಎಂದು , ಬಾಳಗೋಡಿಗೆ ಹೋದ ಅಜ್ಜಿ ಕರೆದಿದ್ದು ನೋಡಿ ನಗಬೇಕಾ ಅಳಬೇಕಾ ಗೊತ್ತಾಗಲಿಲ್ಲ ನಮಗೆ. ಈ ಅಪ್ಪ ಅಮ್ಮ ಏನ್ ಮಾಡಿದ್ರೂ ಬಿಡೋದಿಲ್ಲ, ಅಜ್ಜೀಯಾದ್ರೂ ಇದ್ದಿದ್ದರೆ ಅಪ್ಪ ಅಮ್ಮನ ಕೈಯಿಂದ ಬಿಡಿಸ್ತಾ ಇದ್ಲೇನೋ ಅಂತ ಬಹುಶಃ ನೀನು ಯೋಚನೆ ಮಾಡಿದೆ ಅನ್ಸುತ್ತೆ ಅಲ್ವಾ ಮಗಳೇ......!!!

ನನಗೆ #ಶ್ರೀಧರಭಾಮಿನಿಧಾರೆ ಯನ್ನು ಕೂಡಾ ಬರೆಯಲು ಸಾಧ್ಯವಾಗಲಿಲ್ಲ ಮಗಳೇ, ನಿನ್ನ ಪರಿಸ್ಥಿತಿ ನೋಡಿ. ಒಂದು ವಾರದಲ್ಲಿ ಆಗಲೇ ಸುಮಾರು ಮುಕ್ಕಾಲು ಕೇಜಿ ತೂಕ ಕಡಿಮೆಯಾಗಿದೆ ನಿಂದು.
ಅಂತೂ ಇಂತೂ ಕೊನೆಗೆ ಇವತ್ತು ಬೆಳಿಗ್ಗೆ ಯಿಂದ ಸ್ವಲ್ಪ ಚೇತರಿಸಿಕೊಂಡಿದ್ದೀಯಾ ನೀನು. ಆದರೂ ಇವತ್ತು ನಿನ್ನನ್ನು ಮೂರನೆಯ ಸಲ ಡಾಕ್ಟರ್ ಹತ್ರ ಕರೆದುಕೊಂಡು ಹೋಗಿ ಬಂದಿದ್ದೇನೆ ಮಗಾ..... 

ಮುಂದೊಂದು ದಿನ ಈ ಫೇಸ್ಬುಕ್ ಇದ್ರೆ, ನೀನು ಬೆಳೆದು ದೊಡ್ಡವಳಾದಮೇಲೆ ಇದನ್ನು ಓದಿದರೆ ಆಗ ನನ್ನ ನೆನಪಿಸಿಕೋ ಮಗಳೇ....!!

( ಇದು ನನ್ನೊಬ್ಬನ ಕಥೆ ಅಲ್ಲ. ಮತ್ತಿದು ಕಥೆ ಅಲ್ಲ ಜೀವನ...!! ನನ್ನಂತ ಎಷ್ಟೋ ಅಪ್ಪ ಅಮ್ಮಂದಿರು ಅನುಭವಿಸಿದ, ಅನುಭವಿಸುತ್ತಿರುವ, ಮುಂದೂ ಅನುಭವಿಸುವ ಸಂಗತಿಗಳು.
ನಮ್ಮ ನಮ್ಮ ತಂದೆ ತಾಯಿಗಳಿಗೆ ನಾವು ಎಷ್ಟು ಕೃತಜ್ಞತೆ ತಿಳಿಸಿದರೂ,... ಎಷ್ಟು ಪ್ರೀತಿ ತೋರಿಸಿದರೂ ಸಾಲದು ಅಲ್ಲವೇ .. ??? )


Saturday, September 10, 2016

ಶ್ರೀ ಆಧ್ಯಾತ್ಮ ರಾಮಾಯಣ

ಶ್ರೀ ಆಧ್ಯಾತ್ಮ ರಾಮಾಯಣ : ಪುಸ್ತಕ ಪರಿಚಯ





ಶ್ರೀ ಆಧ್ಯಾತ್ಮ ರಾಮಾಯಣವು ತ್ರೇತಾಯುಗದಲ್ಲಿಯೇ ಶ್ರೀ ವಾಲ್ಮೀಕಿ ಮುನಿವರ್ಯರಿಂದ ಬರೆಯಲ್ಪಟ್ಟಿದೆ.


"ವಾಲ್ಮೀಕಿ ರಾಮಾಯಣ"ವು ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳಿಂದ ಕೂಡಿದ್ದು , ಗ್ರಂಥರೂಪದಲ್ಲಿ ಸಂಸ್ಕೃತ ಭಾಷೆಯಲ್ಲಿದೆ.

ವಿಸ್ತ್ರತವಾಗಿರುವ ಜೊತೆಗೆ ಅದರ ಸಂಸ್ಕೃತ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಕಷ್ಟಕರವಾಗಿರುವುದರಿಂದ ಅದರ ಅಂತರಾರ್ಥ ತಿಳಿಯುವುದು ಕಷ್ಟ ಎಂಬ ಭಾವನೆಯಿಂದ ಈ ಆಧ್ಯಾತ್ಮ ರಾಮಾಯಣವನ್ನು ಬರೆದರು ಎಂಬ ನಂಬಿಕೆಯಿದೆ.








ಈ " ಆಧ್ಯಾತ್ಮ ರಾಮಾಯಣ " ಗ್ರಂಥವನ್ನು ಕಾನಲೆಗ್ರಾಮದ ( ಸಾಗರ ತಾಲ್ಲೂಕು-ಶಿವಮೊಗ್ಗ ಜಿಲ್ಲೆ) ಶ್ರೀಯುತ ಪುಟ್ಟಪ್ಪ ಯಾನೆ ತಿರುಮಲಯ್ಯನವರು, ಜೀರ್ಣರೂಪದಲ್ಲಿದ್ದ ಮೂಲ ಸಂಸ್ಕೃತ ಗ್ರಂಥವನ್ನು ಸಂರಕ್ಷಿಸಿ, ನಂತರ ವಿದ್ವಜ್ಜನರ ಹಾಗೂ ತಮ್ಮ ಜ್ಞಾನಸಂಪತ್ತನ್ನು ವೃದ್ಧಿ ಮಾಡಿಕೊಳ್ಳಲೋಸ್ಕರ, ವೇ.ಬ್ರ.ಶ್ರೀ ಪಟ್ಟಾಭಿರಾಮ ಶಾಸ್ತ್ರಿಗಳು ಹಾಗೂ ವೇ.ಬ್ರ.ಶ್ರೀ ದಕ್ಷಿಣಾಮೂರ್ತಿ ಗಳಿಂದ ಕನ್ನಡ ಭಾಷೆಗೆ ಅನುವಾದ ಮಾಡಿಸಿ ನಂತರ ಪ್ರಕಟ ಮಾಡಿಸಿದ್ದರು. ಹಿರಿಯ ವಿದ್ವಾಂಸರೂ ಸಂಸ್ಕೃತ - ಹಿಂದಿ - ಕನ್ನಡ ಪಂಡಿತರಾದ ಶ್ರೀಯುತ ನಿ.ನಾ.ಮಧ್ಯಸ್ಥರು, ಇದನ್ನು ಪರಿಶೀಲಿಸಿ ನಿರ್ದೇಶಿಸಿದ್ದಾರೆ.


ಶ್ರೀಯುತ. ಕೆ.ವಿ.ಮಂಜುನಾಥ್ ಕುಂಟಗೋಡು ಹಾಗೂ ಕುಮಾರೀ ಶೈಲಾ.ಎನ್ ಇವರು ಅಕ್ಷರ ವಿನ್ಯಾಸದ ಕಾರ್ಯ ನಿರ್ವಹಣೆ ಹೊತ್ತುಕೊಂಡಿದ್ದರು. ಸಾಗರದ ವಿಜ್ಞಾನ್ ಕಂಪ್ಯೂಟರ್ಸ್ ಮತ್ತು ಡಿ.ಟಿ.ಪಿ.ಕೇಂದ್ರದವರು ಅಕ್ಷರ ಜೋಡಣೆ ಮಾಡಿದ್ದಾರೆ. ಗ್ರಂಥಕ್ಕೆ ಮುಖಚಿತ್ರವನ್ನು ಸಾಗರದ ಕಲ್ಯಾಣಿ ಗ್ರಾಫಿಕ್ಸ್ ನವರು ಸುಂದರವಾಗಿ ಮಾಡಿಕೊಟ್ಟಿದ್ದಾರೆ.








ಒಮ್ಮೆ ಉಪಾಹಾರ ಗೃಹಕ್ಕೆ ಸಂಸಾರ ಸಮೇತವಾಗಿ ಭೇಟಿ ನೀಡಿದರೆ ಐದುನೂರು ರೂಪಾಯಿಗಳು ಗೊತ್ತಾಗದಂತೆ ಖರ್ಚಾಗುವ ಈ ಕಾಲದಲ್ಲಿ, ಪ್ರತೀ ಮನೆಯಲ್ಲಿಯು ಇರಲೇಬೇಕಾದ, ನಮ್ಮ ನಂತರದ ಪೀಳಿಗೆಗೆ ಅವಶ್ಯ ಪರಿಚಯ ಇರಲೇ ಬೇಕಾದ ಈ ಹೊತ್ತಿಗೆಯ ಬೆಲೆ ಎರಡು ನೂರು ರೂಪಾಯಿಗಳು.

ಕನ್ನಡದ ಓದುಗರು , ಜಿಜ್ಞಾಸುಗಳು, ಚಿಂತಕರು, ಸಾಹಿತ್ಯಾಸಕ್ತರು, ಆದ್ಯಾತ್ಮ ಸಾಧಕರು, ಜನಸಾಮಾನ್ಯರು ಹೊಂದಿರಲೇಬೇಕಾದ ಈ ಪುಸ್ತಕವನ್ನು ಹೊಂದಲೂ ಯೋಗಬೇಕು ಎಂಬುದು ನನ್ನ ಅಭಿಮತ. ಆಸಕ್ತರು ಪ್ರತಿಗಳಿಗಾಗಿ, ದಿವಂಗತ ಶ್ರೀ ಪುಟ್ಟಪ್ಪ ನವರ ಮೊಮ್ಮಗ , ದಿವಂಗತ ಶ್ರೀ ಲಕ್ಷ್ಮೀನಾರಾಯಣ ರವರ ಮಗ ಶ್ರೀ ಗುರುಪ್ರಸಾದ್ ಇವರಲ್ಲಿ ವಿಚಾರಿಸಬಹುದು.





ನಾನು ಕೇವಲ ಒಳ್ಳೆಯ ಗ್ರಂಥಗಳನ್ನು, ನಿಯತಕಾಲಿಕಗಳನ್ನು ಮಾತ್ರ ನನ್ನ ಸ್ನೇಹಿತರಿಗೆ ಪರಿಚಯಿಸುತ್ತೇನೆ. ಇದು ನಿಮಗೂ ತಿಳಿದಿರಬಹುದು. ಸದ್ಗುರು ಶ್ರೀಧರ ಸ್ವಾಮಿಗಳ ಮೂಲಚರಿತ್ರೆ ನನಗೆ ಪುಣ್ಯಫಲದಿಂದ ದೊರಕಿದ ಬಗ್ಗೆ ಒಮ್ಮೆ ತಿಳಿಸಿದ್ದೇನೆ. ಈಗ ಎಷ್ಟೇ ದುಡ್ಡು ಕೊಡುತ್ತೇನೆಂದರೂ ಅದು ಸಿಗಲಾರದು.. ಅಂತೆಯೇ ಈ ಮಹಾಗ್ರಂಥವೂ ಕೂಡಾ ಸಿಗುವುದು ದುರ್ಲಭವೇ ಆಗಿದೆ. ಅದರಲ್ಲೂ ಹಿಂದೂ ಧರ್ಮದ ಮೇಲೆ , ರಾಮಾಯಣದ ಮೇಲೆ , ತೀವ್ರ ತರನಾದ ದಾಳಿ ನಡೆಯುತ್ತಿರುವ ಈ ಸಂಧರ್ಭದಲ್ಲಿ ನಮ್ಮ ಪೀಳಿಗೆಗೆ ರಾಮಾಯಣದ ಮಹತ್ವವನ್ನು ಪರಿಚಯ ಮಾಡಿಕೊಡಲೇ ಬೇಕಾದ ಅನಿವಾರ್ಯತೆ ಇದೆ. ಬೇರಾರೋ ಈ ದಾಳಿ ಮಾಡಿದರೆ ಸಹಜ ಎನ್ನಬಹುದು, ಆದರೆ ನಮ್ಮವರೇ, ಅರೆಬರೆ ಜ್ಞಾನದಲ್ಲಿ, ಪೂರ್ಣ ಪರಿಚಯ ಇಲ್ಲದೇ , ದುರುದ್ದೇಶಪೂರ್ವಕವಾಗಿ , ದಾಳಿ ಮಾಡುತ್ತಿರುವುದು ಅತ್ಯಂತ ಖೇದಕರ.










ಕೆಲವೇ ಕೆಲವು ಪ್ರತಿಗಳು ಈಗ ಲಭ್ಯವಿದೆ.


ಆಸಕ್ತರು ಶ್ರೀ Guru Hegde Sagar
( 99002 33300 )
(https://www.facebook.com/guru.sagar.50 ) ಅವರನ್ನು ವಿಚಾರಿಸಬಹುದು,
ಅಥವಾ
ನನ್ನ ನಂಬರ್ 81476 88898
ಸಂಪರ್ಕಿಸಬಹುದು .

Friday, September 2, 2016

ಬರಬಳ್ಳಿ ಭಾಗ 1

ಇವಳು ನನ್ನ ಅಜ್ಜಿ ಅಮ್ಮಕ್ಕ ಗಣಪತಿ ಭಟ್ .
ಅಜ್ಜ ಗಣಪತಿ ಭಟ್ರು ಸ್ವಾತಂತ್ರ್ಯ  ಹೋರಾಟಗಾರರು .
ಅಜ್ಜಿ ಅವರಿಗೆ ಸಹಾಯಕಿ .
ಸ್ವಾತಂತ್ರ್ಯ ಹೋರಾಟದಲ್ಲಿ ಇಂತಹ
ಇನ್ನೂ ಎಷ್ಟು ಮಹಾತ್ಮರಿದ್ದಾರೋ ಗೊತ್ತಿಲ್ಲ .
ಬರಬಳ್ಳಿ. ಭಾಗ-೧
------------------------------------------


ಬೇಸಿಗೆ ರಜೆದಸರಾ ರಜೆ ಬಂತೆಂದರೆ ಎಲ್ಲಿಲ್ಲದ  ಖುಷಿ. ಯಾಕೆಂದರೆ ಬರಬಳ್ಳಿಗೆ ಹೋಗಬಹುದಲ್ಲಾ ಎಂದು.

ನನ್ನ ಪ್ರಕಾರ, ಭೂಮಿಯ ಮೇಲಿನ ಸ್ವರ್ಗವಾಗಿತ್ತದು. ಸಾವಿರಾರು ಜಾತಿಯ ಹಲಸಿನ ಮರಗಳು, ಮಾವಿನ ಮರಗಳು, ರಾಂಫಲ, ಸೀತಾಫಲ, ತೆಂಗಿನ ಮರಗಳು, ಬೆಳ್ಳಿಮುಳ್ಳಣ್ಣು, ಪರಿಗೆ ಹಣ್ಣು, ಫೇರಲ ಹಣ್ಣು, ನೇರಳೆಹಣ್ಣು, ಮುರುಗಲಹಣ್ಣು, ಈಚಲಹಣ್ಣು, ಬೇರುಹಲಸಿನ ಮರಗಳು, ಜೇನು, ವಾಸಂತೀಕೆರೆಯ ಶುದ್ಧ ನೀರಿನ ಒರತೆ, ಆಲೇಮನೆ..........ಇಂದು ಇವೆಲ್ಲ ನೆನಪು ಮಾತ್ರ.

ರಜೆ ಬಂದ ತಕ್ಷಣ ನಾನು ಅಜ್ಜನ ಮನೆಗೆ ಹೊರಡಲು ರೆಡಿಯಾಗಿರುತ್ತಿದ್ದೆ. ಮಾವಂದಿರಲ್ಲಿ ಯಾರಾದರೊಬ್ಬರು ಕರೆದೊಯ್ಯುತ್ತಿದ್ದರು ಬರಬಳ್ಳಿಗೆ. ಹಾಗಂತ ಸುಲಭದಲ್ಲಿ ಹೋಗಲಾಗುತ್ತಿರಲಿಲ್ಲ. ಕಾನಲೆಯಿಂದ ಸಿದ್ದಾಪುರ, ಶಿರಸಿ, ಯಲ್ಲಾಪುರ ಹೋಗಲು ಸುಮಾರು ಆರೇಳು ಗಂಟೆಗಳೇ ಹಿಡಿಯುತ್ತಿತ್ತು. ಯಲ್ಲಾಪುರದಿಂದ, ಕಾಲಿಡಲೂ ಸಾಧ್ಯವಿಲ್ಲದಂತೆ ಭರ್ತಿಯಾದ ಕೆಂಪು ಬಸ್ಸಿನಲ್ಲಿ, ಹೇಗೋ ತೂರಿಕೊಂಡು ಹೋಗುವ ಸೊಗಸು, ಅದು ನನಗಷ್ಟೇ ಗೊತ್ತು.

ಯಲ್ಲಾಪುರದಿಂದ ಶಾತೊಡ್ಡಿ ಜಲಪಾತದ ರಸ್ತೆಯಲ್ಲಿ ಹೋದ ಬಸ್ಸು ಅಲ್ಲಿಂದ ಮುಂದೆ ಸಾಗಿ, ವಡ್ಡಿ ದಾಟಿ, ಮುಂದೆ ತಲುಪುತ್ತಿದ್ದುದೇ ಬರಬಳ್ಳಿ.
ದಟ್ಟ ಕಾನನದ ರಸ್ತೆಯಲ್ಲಿ ಬಂದ ಬಸ್ಸು, ಕಾಳೀನದಿಯ ದಂಡೆಯ ಮೇಲೆ ಸಾಗಿ,ಎಡತಿರುಗಿ, ಬರಬಳ್ಳಿ ಪ್ರವೇಶಿಸುತ್ತಲೇ ರೋಮಾಂಚನ...
.
ಮಾವನ ಮನೆಯಲ್ಲಿ ಅದಾಗಲೇ ಬರವು ನೋಡುತ್ತಿದ್ದ ಭಾವಂದಿರೊಡನೆ ಸೇರಿ, ನಮ್ಮ ತಿರುಗಾಟ, ಮರುದಿನದಿಂದಲೇ ಶುರುವಾಗುತ್ತಿತ್ತು.

ಉದ್ದಬ್ಬಿ, ಕೋಟೇಕಲ್ಲು, ವಾಸಂತೀಕೆರೆ, ಕಾಡು, ದಟ್ಟಕಾಡು, ಕಾಳೀನದಿ ದಂಡೆ.... ಇತ್ಯಾದಿ ತಿರುಗಾಟ ಮಾಮೂಲು ಬಿಡಿ..ಆದರೆ ವಡ್ಡಿಗೆ ಹೊಳೆ ಮೀಸಲು ಅಂದರೆ ಹೊಳೆಯಲ್ಲಿ ಈಜಲು ಹೋಗುವ ಅನುಭವ ಮಾತ್ರ ಅನನ್ಯ.

ಬೆಳಿಗ್ಗೆಯಿಂದ ಮಧ್ಯಾಹ್ನದ ವರೆಗೆ ಮನಸೋಇಚ್ಚೆ ನೀರಲ್ಲಿ ಬಿದ್ದು, ಹೊಟ್ಟೆ ಚುರುಗುಟ್ಟಿದೊಡನೆ , ಅಲ್ಲಿಂದ ಎದ್ದು, ಸುಮಾರು ಮೂರು ಕಿಲೋಮೀಟರ್ ದೂರದ ಅಜ್ಜನ ಮನೆಗೆ, ಸುಡುಸುಡು ಮರಳಿನಂತ ಮಣ್ಣಿನಲ್ಲಿ ನಡೆಯುತ್ತ, ಬರಿಗಾಲಿನಲ್ಲಿ ಬರುತ್ತಿದ್ದೆವು... ಚಪ್ಪಲಿ ಯಾರಲ್ಲಿತ್ತು ಆಗ........!!

ಹಲಸಿನಕಾಯಿ ಹುಳಿ ಮಾಡಿರುತ್ತಿದ್ದ ಅಮ್ಮಕ್ಕಜ್ಜಿ, ನಮ್ಮನ್ನು ಕಂಡೊಡನೇ, ಪ್ವಾರಂಗರಾ ಬನ್ನಿ ಉಂಬಲೆ, ಅಂತ ಊಟಹಾಕುತ್ತಿದ್ದಾಗ ..... ಬೇರೆ ಸ್ವರ್ಗ ಬೇಕಾ.

ಊಟದ ವಿಷಯದಲ್ಲಿ ಅದೃಷ್ಟವಂತ ನಾನು. ಸದ್ಗುರುಗಳ ದಯೆಯಿಂದ ಯಾವತ್ತೂ ಊಟಕ್ಕೆ ಕೊರತೆಯಾಗಿಲ್ಲ ಜೀವನದಲ್ಲಿ. ಇರ್ಲಿ. ಈ ಹಲಸಿನಕಾಯಿ ಹುಳಿ ಅಥವಾ ಸಾಂಬಾರ್ ವಿಷಯಕ್ಕೆ ಬರ್ತೀನಿ.

ಹಲಸಿನಕಾಯಿಸೊಳೆಯನ್ನು ಹೆಚ್ಚಿ, ಅದು ಕರಗುವವರೆಗೂ ಬೇಯಿಸಿ ಮಾಡುವ ಈ ಹುಳಿ ಅದ್ಬುತವಾಗಿರುತ್ತಿತ್ತು. ಎಷ್ಟೋ ದಿನ ಅನ್ನವನ್ನೇ ಹಾಕಿಸಿಕೊಳ್ಳದೇ ಬರೀ ಇದನ್ನೇ ತಿಂದಿದ್ದೂ ಇದೆ. ತೊಗರಿಬೇಳೆಯ ತೊವ್ವೆ ಬಹುಶಃ ಬಹಳ ಜನ ತಿಂದಿರಬಹುದು. ಇದು ಅದಕ್ಕಿಂತ ಮಂದವಾಗಿರುವ ಅಥವಾ ದಪ್ಪನಾದ ಸಾಂಬಾರ್. ಅದರಲ್ಲಿ ಬೆಂದು ಮೆತ್ತಗಾಗಿರುವ ಹಲಸಿನ ಸೊಳೆಗಳನ್ನು ತಿನ್ನುವುದೂ ಒಂದು ಆನಂದ.

ಜೊತೆಗೆ ಮೊತ್ತೊಂದು ಅಡುಗೆ ಮಾವಿನಕಾಯಿ ಕೆಂಪು ಚಟ್ನಿ. ಮಾವಿನಕಾಯಿಯ ಹೋಳುಗಳಿಗೆ ತೆಂಗಿನಕಾಯಿತುರಿ ಸೇರಿಸಿ ಬೀಸಿ, ಅದಕ್ಕೆ ಇಂಗಿನ ವಗ್ಗರಣೆ ಹಾಕಿದ ಆ ಚಟ್ನಿಯ ರುಚಿಯೇ ರುಚಿ. ನನ್ನಜ್ಜಿ ಅಮ್ಮಕ್ಕಜ್ಜಿಯ ಕೈರುಚಿ ಹಾಗಿತ್ತು.



ಕಾಡು ತಿರುಗುವುದು ನಮ್ಮ ನೆಚ್ಚಿನ ಹವ್ಯಾಸ. ಊರಿನ ಒಂದು ಭಾಗದಲ್ಲಿ ಕಾಳೀನದಿ ಹರಿಯುತ್ತಿತ್ತು. ಉಳಿದೆಲ್ಲ ಭಾಗವೂ ಕಾಡೇ. ದಟ್ಟ ಕಾಡಿನ ಕಾಲ್ದಾರಿಗಳಲ್ಲಿ ಸಾಗುವಾಗ ಹುಲಿ,ಸಿಂಹ,ಕರಡಿ,ಕಾಡುಹಂದಿಗಳೆಲ್ಲ ಬಂದುಹೋಗುತ್ತಿದ್ದವು...ಮನದಲ್ಲಿ.

ಎಷ್ಟೋ ಸಲ ನಾವು ಉದ್ದಬ್ಬಿಗೆ ಹೋಗಿಅಲ್ಲಿಂದ ಕೋಟೇಕಲ್ಲಿಗೆ ಹೋಗಿ ಬಂದಿದ್ದೇವೆ. ಉದ್ದಬ್ಬಿಗೆ ಹೋಗುವ ದಾರಿಯಲ್ಲೇ ತಿರುಗಿ ದೊಡ್ಡ ಕಲ್ಲಿನ ಗುಹೆ ಇರುವ ಜಾಗಕ್ಕೂ ಹೋಗಿದ್ದೇವೆ. ಅಲ್ಲಿ ಗುಹೆಯಲ್ಲಿರುವ ಬಾವಲಿಗಳನ್ನು ನೋಡಿ ಭಯಮಿಶ್ರಿತ ಸಂತೋಷದೊಂದಿಗೆ ರೋಮಾಂಚನವನ್ನೂ ಅನುಭವಿಸಿದ್ದೇವೆ. ಇಂದು ಬಹುಶಃ ಅದೆಲ್ಲವೂ ಹಳವಂಡಗಳು......
ಬ್ರಹ್ಮಾಂಡ ಗಾತ್ರದ ಮರಗಳುಆಕಾಶದೆತ್ತರದಲ್ಲಿ ಇದ್ದ ಜೇನುಗೂಡುಗಳುಬಿಳಿಯ ಬೂರುಗದ ಮರಕಾಡಿನ ನಡುವೆ ಇದ್ದ ಸಿಹಿಯಾದ ಹಣ್ಣು ಕೊಡುತ್ತಿದ್ದ ಮಾವಿನ ಮರಗಳು ರುಚಿಯಲ್ಲಿ ಎಲ್ಲವನ್ನೂ ಮೀರಿಸುವ ಬೇರುಹಲಸುಎಲ್ಲವೂ ಈಗ ನೆನಪು ಮಾತ್ರ.
ಬೆಳಿಗ್ಗೆ ಎದ್ದಾಕ್ಷಣ ನಾವು ಮಾಡುತ್ತಿದ್ದ ಮೊದಲ ಕೆಲಸ ಮಾವಿನ ಮರಗಳ ಹತ್ತಿರ ಓಡುವುದು. ಖಳಮಾಯ ಎಂಬಅರ್ಧ ಕೆಂಪು ಅರ್ಧ ಹಸಿರು ಬಣ್ಣದ ಹಣ್ಣಾಗುವ ಮರವೊಂದಿತ್ತು. ಅದರ ಬುಡದಲ್ಲಿ ಅರ್ಧ ಬುಟ್ಟಿ ಹಣ್ಣು ಗ್ಯಾರಂಟಿ. ಹಲವು ಈಷಾಡಿ ಹಣ್ಣಿನ ಮರಗಳಿದ್ದವು. ಮನೆಯ ಪಕ್ಕದಲ್ಲೆ ಮೃದುಮಧುರ ಹಣ್ಣಿನ ಗೋಮಾಯವಿತ್ತು. ಹಣ್ಣುಗಳನ್ನು ಆರಿಸಿಕೊಳ್ಳಲು ನಮ್ಮನಮ್ಮಲ್ಲೇ ಹೊಡೆದಾಟವೂ ಆಗುತ್ತಿತ್ತು.
ಎಲ್ಲಕ್ಕಿಂತ ಮಿಗಿಲಾದ ಒಂದು ಮರವಿತ್ತು. ಈಷಾಡೀ ಹಣ್ಣೇಆದರೆ ಮರ ರೆಂಬೆಕೊಂಬೆಗಳಿಲ್ಲದೇ ಸುಮಾರು ಐವತ್ತು ಅಡಿ ಎತ್ತರ ಹೋಗಿತ್ತು. ಅದರ ಹಣ್ಣು ಸಣ್ಣದೊಂದು ಸಿಪ್ಪೆಸಹಿತದ ತೆಂಗಿನ ಕಾಯಿಯ ಗಾತ್ರ. ಒಳಗಿನ ಒರಟೆ ಮಾತ್ರ ಬಲು ಚಿಕ್ಕದು. ಎಷ್ಟು ಚಿಕ್ಕದೆಂದರೆದೊಡ್ಡ ಸಿಪ್ಪೆಸಹಿತದ ಹಣ್ಣಡಿಕೆ ಗಾತ್ರ. ಹಣ್ಣು ಸಂಪೂರ್ಣ ತಿರುಳಿನಿಂದ ಆವೃತವಾಗಿರುತ್ತಿತ್ತು. ಅತ್ಯಂತ ಮೃದು ಮಧುರ ಹಣ್ಣು. ಅಂತ ಮಾವಿನ ಹಣ್ಣನ್ನು ನಾನು ಬೇರೆಲ್ಲೂ ತಿಂದಿಲ್ಲ.
ಅದಲ್ಲದೇ ವಾಸಂತಿ ಕೆರೆಯ ಹತ್ತಿರವಿದ್ದ ಮಾಮರಇನ್ನೊಂದಿತ್ತುನರಸಿಂಹ ಮಾವನ ಮನೆಯ ತೋಟದಲ್ಲಿದ್ದ ಸಕ್ಕರೆ ಮಾವು. ಹೆಸರಿಗೆ ತಕ್ಕಂತಿತ್ತು ಆ ಹಣ್ಣು. ಗಾತ್ರದಲ್ಲಿ ಸಣ್ಣದು ಆದರೆ ರುಚಿ......ಅದ್ಭುತ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಅಂತಾರಲ್ಲ ಹಾಗೆ. 
ಹಾಗೆಯೇಹಲಸಿನ ಮರಗಳು ಸಾವಿರಾರು ಸಂಖ್ಯೆಯಲ್ಲಿದ್ದವು. ಬಕ್ಕೆ ಮತ್ತು ಬಿಳುವ ಎಂಬೆರಡು ಜಾತಿಯ ಅಸಂಖ್ಯಾತ ಮರಗಳು. ಮರ ಹತ್ತಿದರೆ ನಾವು ಕೋತಿಗಳೇ. ಒಂದಿಡೀ ಹಣ್ಣನ್ನೇ ತಿಂದು ಕೆಳಗಿಳಿಯುತ್ತಿದ್ದೆವು. ಸಿಪ್ಪೆ ಮತ್ತು ಸಾರೆಯನ್ನು ಮರದ ಮೇಲೆಯೇ ಇಟ್ಟು.....!!
ಪರಿಗೀ ಹಣ್ಣುಬಿಳಿಮುಳ್ಳಣ್ಣು ಅಥವಾ ಬೆಳ್ಳೀಮುಳ್ಳಣ್ಣುನುರುಕಲ ಹಣ್ಣುಸಂಪಿಗೆಹಣ್ಣುಪೇರಲಹಣ್ಣುರಾಂಫಲಸೀತಾಫಲನೇರಳೇಮುರುಗಲುಈಚಲುಹಣ್ಣುಮತ್ತು ಅಸಂಖ್ಯಾತ ಹೆಸರೇ ಗೊತ್ತಿಲ್ಲದ ಹಣ್ಣುಗಳು...! ರುಚಿ ಮಾತ್ರ ಗೊತ್ತು ನನಗೆ. 





ಕೆಲವೊಮ್ಮೆ ರಾತ್ರಿ ಶಿಕಾರಿಗೆ ಹೊರಡುತ್ತಿದ್ದೆವು. ಶಿಕಾರಿ ಎಂದರೆ ಕಾಡುಪ್ರಾಣಿಗಳ ಬೇಟೆ ಅಂತ ತಿಳಿಯಬೇಡಿ. ಎಳನೀರ ಶಿಕಾರಿ..!! ಹತ್ತಿರದಲ್ಲಿದ್ದ ಅಂಬಡೇ ಮನೆ ತೋಟದ ತೆಂಗಿನ ಮರಗಳೇ ನಮ್ಮ ಗುರಿ. ನಾನು ಮರ ಹತ್ತುತ್ತಿರಲಿಲ್ಲ ಯಾಕೆಂದರೆ ಮೊದಲಿಂದಲೂ ನಾನು ಸ್ವಲ್ಪ ಗಜಗಾತ್ರದವ. ದಷ್ಟಪುಷ್ಟವಾಗಿದ್ದೆ. ತಾಕತ್ತು ಉಪಯೋಗಿಸುವ ಕೆಲಸಕ್ಕೆ ಮೊದಲು ಮುನ್ನುಗ್ಗುತ್ತಿದ್ದೆ. ಆದರೆ ದೊಡ್ಡ ದೇಹ ಹೊತ್ತುಕೊಂಡು ತೆಂಗಿನ ಮರ ಹತ್ತುವುದು....! ಊಹೂಂಸಾದ್ಯವಿರಲಿಲ್ಲ. ಆದರೆ ನಮ್ಮ ಗುಂಪಿನಲ್ಲಿ ತೆಂಗಿನ ಮರ ಹತ್ತಲು ಅಸಾಧ್ಯ ಕಲಾಕಾರರಿದ್ದರು. ಮರಕ್ಕೇ ಗೊತ್ತಾಗದಂತೆ ಮರ ಹತ್ತುವವರಿದ್ದರು. ನಾವು ಒಂದೆರಡು ಜನ ಕೆಳಗೆ ಕಾವಲು ಕಾಯುವವರು. ಒಬ್ಬಿಬ್ಬರು ಮರ ಹತ್ತಿ ಎಳನೀರು ಇಳಿಸುವವರು. ಯಾರಾದರೂ ಬಂದರೆ ನಾವು ಸುಳಿವು ಕೊಟ್ಟು ಜಾರಿಕೊಳ್ಳುತ್ತಿದ್ದೆವು. ಮರ ಹತ್ತಿದವರು ಇನ್ನೂ ಮೇಲೆ ಹತ್ತಿ ತೆಂಗಿನ ಹೆಡೆಗಳ ಮೇಲೆ ಅಡಗಿ ಕೂರುತ್ತಿದ್ದರು. ಕೆಲವೊಮ್ಮೇ ಅಲ್ಲೇ ಕುಳಿತು ಐದಾರು ಎಳನೀರು ಕುಡಿದುಚಿಪ್ಪನ್ನು ಮರದಮೇಲೆಯೇ ಇಟ್ಟು ಬರುತ್ತಿದ್ದರು. ನಂತರ ನಾವು ಒಬ್ಬೊಬ್ಬರು ಹತ್ತು ಹನ್ನೆರಡು ಎಳನೀರು ಕುಡಿಯುತ್ತಿದ್ದೆವು. 
ಕೆಲವು ವರ್ಷ ನರಸಿಂಹ ಮಾವನ ಮನೆಯ ( ಅವನಿಗೆ ನಾನು ಕರೆಯುವುದು ನರಸಿಂವ್ವಣ್ಣಮಾವ ಅಂತ .. ) ಗದ್ದೆಯಲ್ಲಿ ಶೇಂಗಾ ಬೆಳೆಯುತ್ತಿದ್ದರು. ಒಣಗಿದ ಗಿಡಗಳನ್ನು ಕಿತ್ತುಕೊಂಡು ಬಂದ ಮೇಲೆ ಅದರಿಂದ ಶೇಂಗಾ ಬಿಡಿಸಿ ಅದನ್ನು ಒಡೆದು ಶೇಂಗಾ ಕಾಳುಗಳನ್ನು ಮಾಡಬೇಕಲ್ಲಅದಕ್ಕೆ ಹೋಗುತ್ತಿದ್ದೆ. ಅಲ್ಲಿ ತಿನ್ನುವಷ್ಟು ಶೇಂಗಾಬೀಜ ಸಿಗುತ್ತಿತ್ತು. ಬಾಲ್ಯ ಅಂದರೇ ಹಾಗೆ ನಮಗೆ. ಎಲ್ಲಿ ಏನು ತಿನ್ನಲು ಸಿಗುತ್ತದೆ ಎಂದು ಹುಡುಕುವುದು. ಎಷ್ಟು ತಿಂದರೂ ಭಗವಂತನ ದಯದಿಂದ ಆರೋಗ್ಯಕ್ಕೇನೂ ಆಗುತ್ತಿರಲಿಲ್ಲ. 
ಇಂದಿನ ಚಿಕ್ಕಮಕ್ಕಳನ್ನು ನೋಡಿದಾಗನನಗೆ ಅಯ್ಯೋ ಅನ್ನಿಸುತ್ತದೆ. ಅದರಲ್ಲೂ ಪಟ್ಟಣದಲ್ಲಿ ಇರುವಅಲ್ಲಿ ಹುಟ್ಟಿ ಬೆಳೆದ ಮಕ್ಕಳು ಪಾಪ ಅವುಬಾಲ್ಯದ ಸೊಗಸುಗಳನ್ನು ಕಾಣದಬಾಲ್ಯದ ಆಟೋಟಗಳನ್ನು ಕಾಣದ ಪೀಳಿಗೆ. ಬೆಳಿಗ್ಗೆ ಎದ್ದು ಬಸ್ಸುಆಟೋ ಹತ್ತಿ ಶಾಲೆಗೆ ಹೊರಟು ಕಾಂಕ್ರೀಟ್ ಕಾಡಿನ ನಡುವಿನ ಶಾಲೆಯಲ್ಲಿ ದಿನಕಳೆದುವಾಪಸ್ಸು ಮನೆಗೆ ಬಂದು ಟೀವಿ ನೋಡುತ್ತ ಕೂರುತ್ತವೆ. ಮಮ್ಮೀ ಸೀ ದೇರ್ ಫಾರೆಸ್ಟ್ ಅಂತ ಟೀವಿಯಲ್ಲಿ ಕಂಡ ಕಾಡನ್ನು ನೋಡಿ ಕುಣಿದಾಡುತ್ತವೆ. ಬಾಲ್ಯದಲ್ಲಿ ನಾನು ಕಾಡುಹಂದಿ ಮತ್ತು ಕರಿಚಿರತೆಯನ್ನು ಕಾಡಲ್ಲೇ ನೋಡಿದ್ದೆ. 


ಹಾಂ..ಮರೆತೆ. ಬರಬಳ್ಳಿಯ ಮಹಾಗಣಪತಿ ದೇವಸ್ಥಾನದಲ್ಲಿ ,ಯುಗಾದಿಯ ನಂತರ ಭಜನಾ ಕಾರ್ಯಕ್ರಮ ನಡೆಯುತ್ತಿತ್ತು. ಈಗ ಅದು ಹೆಗ್ಗಾರಿನಲ್ಲಿ ಪರಂಪರೆಯಂತೆ ನಡೆಯುತ್ತಿದೆ. ಆದರೆ ಆಗಿನ ಕಾಲದ ಸೊಗಸು ಮತ್ತೆ ಬರಲಾರದು. ರಾತ್ರಿ ಭಜನೆ ಮುಗಿಸಿ ನಾವೆಲ್ಲ ಮನೆಗಳಿಗೆ ವಾಪಸಾಗುವಾಗ ಸೂಡಿ ಹತ್ತಿಸಿಕೊಂಡು ಬರುತ್ತಿದ್ದ ಆ ಮಧುರ ನೆನಪುಗಳು ಬೇರೆಲ್ಲೂ ಸಿಗಲಾರದು. ಸೂಡಿ ಅಂದರೆ ಏನು ಅಂತ ಯೋಚಿಸುತ್ತಿದ್ದೀರಾ..?? ತೆಂಗಿನ ಗರಿ ಅಥವಾ ಅಡಕೇಸೋಗೆಯನ್ನು ಕಸಬರಿಗೆಯಂತೆ ಕಟ್ಟಿ ಅದರ ಒಂದು ತುದಿಗೆ ಬೆಂಕಿ ಹತ್ತಿಸಿಕೊಂಡು ಅದರ ಬೆಳಕಲ್ಲಿ ಸುಮಾರು ಒಂದು ಕಿಲೋಮೀಟರ್ ನಡೆದು ಬರುತ್ತಿದ್ದೆವು. ಬೇರೆ ಟಾರ್ಚ್ ಎಲ್ಲಿತ್ತು ಆ ಕಾಲದಲ್ಲಿ. ಆಗ ಸಿಕ್ಕಿದ್ದ ಒಂದೇ ಒಂದು ಲಕ್ಷುರಿ ವಸ್ತು ಅಂದರೆ ಮಾವನ ಮನೆಯಲ್ಲಿದ್ದ ಫಿಲಿಫ್ಸ್ ರೇಡಿಯೋ. 

ನಾವು ಬೇಸಿಗೆ ರಜದಲ್ಲೇ ಹೆಚ್ಚಾಗಿ ಅಲ್ಲಿರುತ್ತಿದ್ದುದರಿಂದಆ ಸಮಯದಲ್ಲಿ ಬಹಳ ಸೆಕೆಯೂ ಇರುತ್ತಿದ್ದುದರಿಂದದಿನಾ ಎರಡು ಮೂರು ಸ್ನಾನ ಗ್ಯಾರಂಟಿ ಇತ್ತು. ರಾತ್ರಿಯ ಹೊತ್ತುಧಾರಾಕಾರವಾಗಿ ಬೀಳುತ್ತಿದ್ದ ಅಬ್ಬಿಯ ನೀರಲ್ಲಿರೇಡಿಯೋ ಕೇಳುತ್ತಗಂಟೆಗಟ್ಟಲೇ ಸ್ನಾನ ಮಾಡುತ್ತಿದ್ದ ನೆನಪು ಈ ಜನ್ಮಕ್ಕೆ ಮರೆಯಾಗುವುದಿಲ್ಲ..


( ಮುಂದುವರೆಯುತ್ತದೆ...........
ಯಾಕೇಂದ್ರೆ ಹೇಳೋದು ಬಹಳಷ್ಟಿದೆ.....)