Monday, September 19, 2016

ಮಗಳಿಗೆ ಜ್ವರ

ಮಗಳೇ.........
ನಿನಗೆ ಜ್ವರ ಬಂದು ಇವತ್ತಿಗೆ ಸರಿಯಾಗಿ ಎಂಟು ದಿನ ಆಯ್ತು...!!

ಈ ಎಂಟು ದಿನದಲ್ಲಿ ನಾವು ನೆಮ್ಮದಿಯಿಂದ ನಿದ್ದೆ ಮಾಡಿದ್ದು ನಿನ್ನೆ ರಾತ್ರಿ ಮಾತ್ರ ಮಗಳೇ..!

ಬೇರೆ ಏನೂ ಕೆಲಸ ಮಾಡೋದಿಕ್ಕೇ ಸಾಧ್ಯ ಆಗದೇ , ಕೇವಲ ನಿನ್ನ ಆರೈಕೆಯೊಂದೇ ನಮ್ಮ ಏಕಮಾತ್ರ ಗುರಿ ಆಗಿಬಿಟ್ಟಿದೆ.

ಕಳೆದ ಸೋಮವಾರ ಹಿಂದೂ ಮಹಾಸಭಾ ಗಣಪತಿ ಬಿಡುವ ಮೆರವಣಿಗೆ ತೋರಿಸಲು ನಿನ್ನ ಕರೆದುಕೊಂಡು ಹೋದಾಗ , ಆ ಪಟಾಕಿ ಹೊಡೆದ ಶಬ್ದಕ್ಕೆ ಬೆಚ್ಚಿಬಿದ್ದು ನನ್ನ ಕುತ್ತಿಗೆಯ ಸುತ್ತ ಗಟ್ಟಿಯಾಗಿ ತಬ್ಬಿ ಹಿಡಿದಿದ್ದೆ ನೀನು. ತಕ್ಷಣ ವಾಪಾಸು ಕರೆದು ಕೊಂಡು ಬಂದೆ. ಆಗಲೇ ಸಣ್ಣದಾಗಿ ನಿನಗೆ ಜ್ವರ ಇತ್ತು. ನಂತರ ಸತತ ಎರಡು ದಿನ ಮಳೆ ಬಂತಲ್ಲ, ಬಹುಶಃ ವಾತಾವರಣದ ವ್ಯತ್ಯಾಸದಿಂದ ಜ್ವರ ಬಂತು ಅಂತ ಯೋಚಿಸಿದ ನಾವು , ನಿನ್ನನ್ನ ವೈದ್ಯ ಡಾಕ್ಟರ್ ಹತ್ರ ಕರೆದುಕೊಂಡು ಹೋಗಿದ್ದೆವು.
ನಮ್ಮ ಲೆಕ್ಕದಲ್ಲಿ ಬೇಗನೇ ಹೋಗಿದ್ದರೂ, ನಮಗೆ ಸಿಕ್ಕ ಟೋಕನ್ ಮಾತ್ರ ಇಪ್ಪತ್ತೆರಡನೆಯದು. ಸುಮಾರು ಒಂದೂವರೆ ಗಂಟೆಗಳ ಕಾಲ, ನಡುನಡುವೆ ಗಲಾಟೆ ಮಾಡುತ್ತಿದ್ದ ನಿನ್ನನ್ನು ಸಮಾಧಾನ ಪಡಿಸುತ್ತಾ, ಎತ್ತಿಕೊಂಡು ಹೊರಗಡೆ ಸುತ್ತಾಡಿಸುತ್ತಾ,  ನಾವಲ್ಲೇ ಕುಳಿತು, ಡಾಕ್ಟರ್ ಸಿಕ್ಕಿದ ನಂತರ ನಿನ್ನನ್ನು ಅವರಿಗೆ ತೋರಿಸಿ, ಈಗಾಗಲೇ ಹಾಕುತ್ತಿರುವ ಔಷಧಿಯನ್ನೇ ಮುಂದುವರೆಸಿ ಅಂತ ಅವರು ಹೇಳಿದ ಮೇಲೆ ವಾಪಸ್ಸು ಬಂದಿದ್ದೆವು.

ಆದರೆ ಜ್ವರ ಗುಣವಾಗಿರಲಿಲ್ಲ.

ನಡುವೆ ನಿನ್ನ ಎರಡು ಜನ ಅಜ್ಜಿಯರನ್ನೂ ಅವರವರ ಮನೆಗೆ ಬಿಟ್ಟು ಬರಲು ಹೋಗಬೇಕಾಯ್ತು.ನಾವು ಹೋಗುವಾಗ ನೀನು ಅಳುತ್ತಿದ್ದೆ. ಆ ಅಳುವಿನ ಶಬ್ದ ಇನ್ನೂ ಕಿವಿಯಲ್ಲಿದೆ. ಒಂದು ವಾರದಿಂದ ತುಂಬಿದ ಮನೆಯಲ್ಲಿದ್ದ ನಿನಗೆ ಏಕಾಏಕಿ ಎಲ್ಲರೂ ಹೊರಟು ಹೋಗಿದ್ದು ತಡೆಯಲಾಗಲಿಲ್ಲ ಅಂತ ಗೊತ್ತಾದ್ರೂ , ... ಏನೂ ಮಾಡೋ ಹಾಗಿರಲಿಲ್ಲ.

ಸಾಗರ ಹೋದ ತಕ್ಷಣ  ತಡೆಯಲಾಗದೇ ಫೋನ್ ಮಾಡಿದರೆ ಕೇಳಿದ್ದು ಮತ್ತೆ ನಿನ್ನ ಅಳುವೇ...!!

ಮರುದಿನ ಬೆಳಿಗ್ಗೆ ಎದ್ದು ಫೋನ್ ಮಾಡಿದ್ರೆ , ನಿನಗೆ ವಾಂತಿ-ಭೇದಿ ಶುರುವಾಗಿದೆ ಎಂಬ ಸುದ್ದಿ ಬಂತು. ಪೂರ್ವನಿಗಧಿತ ಕೆಲಸ ಕಾರ್ಯಗಳನ್ನು ಅರ್ದಂಬರ್ಧ ಮಾಡಿ, ಉಳಿದ  ಕೆಲಸಗಳನ್ನು ಅರ್ಧದಲ್ಲಿಯೇ ಬಿಟ್ಟು ಮತ್ತೆ ಓಡಿಬಂದೆ. ಅದಾಗಲೇ ನೀನು ಪೂರ್ತಿ ಸುಸ್ತಾಗಿದ್ದೆ ಮಗಾ. ಮಲಗಿದವಳು ನಾನು ಬಂದಿದ್ದು ತಿಳಿದು, ಅಲ್ಲೇ ತಿರುಗಿ ನೋಡಿದೆಯಲ್ಲ...... ಆಗಲೇ ಗೊತ್ತಾಯಿತು.. ನಿನಗೆ ಮೇಲೇಳಲೂ ಶಕ್ತಿ ಇಲ್ಲ ಅಂತ.  ನಿನ್ನ ನೋಡಿ ಕಣ್ಣಂಚಲ್ಲಿ ಎರಡು ಹನಿಗಳು ಉದುರಿದ್ದು ನಿನ್ನ ಅಮ್ಮನಿಗೆ ಗೊತ್ತಾಗದಂತೆ ಒರೆಸಿಕೊಂಡೆ. ನನಗಿಂತ ಹೆಚ್ಚು ಗಾಬರಿಯಾಗಿದ್ದು, ಬೇಸರದಿಂದ ಇದ್ದಿದ್ದು ನಿನ್ನ ಅಮ್ಮ ಮಗಳೇ..!

ಸತತ ಮೂರುದಿನದಿಂದ ರಾತ್ರಿಯಿಡೀ ನಿದ್ದೆ ಇಲ್ಲದೇ , ಪದೇ ಪದೇ ನೀನು ಎದ್ದಾಗಲೆಲ್ಲ ಎದ್ದು ಹೈರಾಣಾದವಳು ಅವಳು. ಅಪ್ಪಂದಿರಿಗೆ ಎಷ್ಟೇ ಪ್ರೀತಿ ಇದ್ದರೂ ರಾತ್ರಿಯೆಲ್ಲ ಎದ್ದಿರುವುದು ಅಪರೂಪ. ಆದರೆ ನನಗೆ ಈ ಮೂರ್ನಾಲ್ಕು ದಿನಗಳಲ್ಲಿ ರಾತ್ರಿ ನಿದ್ದೆ ಬರಲಿಲ್ಲ. ನಿನ್ನ ಅಮ್ಮನಿಗೆ ಕೈಸೋತು ಬಂದಾಕ್ಷಣ , ನಿನ್ನನ್ನು ಹೆಗಲಮೇಲೆ ಹೊತ್ತು, ಬೆನ್ನು ತಟ್ಟುತ್ತಾ ಸಮಾಧಾನ ಮಾಡುತ್ತಿರುವಾಗ ಅನ್ನಸಿತು ಮಗಾ, ಎಲ್ಲಿದ್ದೆ ನೀನು? ಎಲ್ಲಿಂದ ಬಂದೆ? ಅಷ್ಟು  ಆನಂದ ಕೊಟ್ಟು ಈಗ ಜೀವ  ಚಡಪಡಿಸುವಂತೆ ಮಾಡುತ್ತಿದ್ದೀಯಾ? ಮಗಳೆ ನೀನು ಅಂದ್ರೆ ನಂಗೆ ತುಂಬಾ ಪ್ರೀತಿ......!!!

ವಾಂತಿಯೇನೋ ಒಂದು ದಿನ ಕಳೆದ ತಕ್ಷಣ ನಿಂತಿತು, ಆದರೆ ಭೇದಿ..? ಸತತ ಮೂರುದಿನ ಹೊಟ್ಟೆ ಕಾಲಿಯಾದರೆ ದೇಹದಲ್ಲಿ ಶಕ್ತಿತಾನೇ ಹೇಗೆ ಇರುತ್ತೆ.?
ವೈದ್ಯ ಡಾಕ್ಟರ್ ಆಸ್ಪತ್ರೆ ಎದುರು, ಅಳುತ್ತಿದ್ದ ನಿನ್ನನ್ನು ಎತ್ತಿಕೊಂಡು ಹೊರಗೆ ಬಂದು , ತೆಂಗಿನ ಮರದ ಮೇಲೆ ಕೂತ ಕಾಗೆ ತೋರಿಸಿದೆ. ತಲೆ ಎತ್ತಿ ಮೇಲೆ ನೋಡಿದ ನಿನ್ನ ತಲೆ ಹಾಗೇ ಹಿಂದಕ್ಕೆ ವಾಲಿತು.. ಅಷ್ಟು ಸುಸ್ತಾಗಿದ್ದೆ ನೀನು ಮಗಳೇ...!!

ಜೊತೆಗೆ ನಮ್ಮ ಸಮಸ್ಯೆ ಅಂದರೆ ನೀನು ಏನೇನೂ ತಿನ್ನದೇ ಇರುವುದು. ಹೌದು ಮಗಳೇ....ನೀನು ಏನನ್ನೂ ತಿಂದು ಅಥವಾ ಕುಡಿದು ಮಾಡುತ್ತಿರಲಿಲ್ಲ. ಕೊನೆಗೆ ORS ಕೂಡಾ ಕುಡಿಯದೇ, ಬಲವಂತದಿಂದ ಕುಡಿಸಿದರೆ ವಾಂತಿ ಮಾಡುತ್ತಿದ್ದೆ ನೀನು. ಇನ್ನು ಔಷಧಿ ಕುಡಿಸುವುದು ಹೇಗೆ??
ಬಲವಂತದಿಂದ ಕೈಕಾಲು ಹಿಡಿದು ಕುಡಿಸುವಾಗ ನೀನು   ' ಅಜ್ಜೀ.......... ' ಎಂದು , ಬಾಳಗೋಡಿಗೆ ಹೋದ ಅಜ್ಜಿ ಕರೆದಿದ್ದು ನೋಡಿ ನಗಬೇಕಾ ಅಳಬೇಕಾ ಗೊತ್ತಾಗಲಿಲ್ಲ ನಮಗೆ. ಈ ಅಪ್ಪ ಅಮ್ಮ ಏನ್ ಮಾಡಿದ್ರೂ ಬಿಡೋದಿಲ್ಲ, ಅಜ್ಜೀಯಾದ್ರೂ ಇದ್ದಿದ್ದರೆ ಅಪ್ಪ ಅಮ್ಮನ ಕೈಯಿಂದ ಬಿಡಿಸ್ತಾ ಇದ್ಲೇನೋ ಅಂತ ಬಹುಶಃ ನೀನು ಯೋಚನೆ ಮಾಡಿದೆ ಅನ್ಸುತ್ತೆ ಅಲ್ವಾ ಮಗಳೇ......!!!

ನನಗೆ #ಶ್ರೀಧರಭಾಮಿನಿಧಾರೆ ಯನ್ನು ಕೂಡಾ ಬರೆಯಲು ಸಾಧ್ಯವಾಗಲಿಲ್ಲ ಮಗಳೇ, ನಿನ್ನ ಪರಿಸ್ಥಿತಿ ನೋಡಿ. ಒಂದು ವಾರದಲ್ಲಿ ಆಗಲೇ ಸುಮಾರು ಮುಕ್ಕಾಲು ಕೇಜಿ ತೂಕ ಕಡಿಮೆಯಾಗಿದೆ ನಿಂದು.
ಅಂತೂ ಇಂತೂ ಕೊನೆಗೆ ಇವತ್ತು ಬೆಳಿಗ್ಗೆ ಯಿಂದ ಸ್ವಲ್ಪ ಚೇತರಿಸಿಕೊಂಡಿದ್ದೀಯಾ ನೀನು. ಆದರೂ ಇವತ್ತು ನಿನ್ನನ್ನು ಮೂರನೆಯ ಸಲ ಡಾಕ್ಟರ್ ಹತ್ರ ಕರೆದುಕೊಂಡು ಹೋಗಿ ಬಂದಿದ್ದೇನೆ ಮಗಾ..... 

ಮುಂದೊಂದು ದಿನ ಈ ಫೇಸ್ಬುಕ್ ಇದ್ರೆ, ನೀನು ಬೆಳೆದು ದೊಡ್ಡವಳಾದಮೇಲೆ ಇದನ್ನು ಓದಿದರೆ ಆಗ ನನ್ನ ನೆನಪಿಸಿಕೋ ಮಗಳೇ....!!

( ಇದು ನನ್ನೊಬ್ಬನ ಕಥೆ ಅಲ್ಲ. ಮತ್ತಿದು ಕಥೆ ಅಲ್ಲ ಜೀವನ...!! ನನ್ನಂತ ಎಷ್ಟೋ ಅಪ್ಪ ಅಮ್ಮಂದಿರು ಅನುಭವಿಸಿದ, ಅನುಭವಿಸುತ್ತಿರುವ, ಮುಂದೂ ಅನುಭವಿಸುವ ಸಂಗತಿಗಳು.
ನಮ್ಮ ನಮ್ಮ ತಂದೆ ತಾಯಿಗಳಿಗೆ ನಾವು ಎಷ್ಟು ಕೃತಜ್ಞತೆ ತಿಳಿಸಿದರೂ,... ಎಷ್ಟು ಪ್ರೀತಿ ತೋರಿಸಿದರೂ ಸಾಲದು ಅಲ್ಲವೇ .. ??? )


No comments:

Post a Comment